Advertisement

ವಿಪತ್ತು ನಿರ್ವಹಣೆಗೆ ಬೋಟ್‌ ಇಲ್ಲದ ಜಿಲ್ಲಾಡಳಿತ

10:26 AM Jul 09, 2018 | Team Udayavani |

ಶಿರ್ವ: ಜಿಲ್ಲೆಯಲ್ಲಿ ಎರಡು ದಿನ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ. ರಸ್ತೆ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು. ಜಲಾವೃತ ಸ್ಥಳಗಳಿಂದ ಅಗ್ನಿಶಾಮಕ ದಳದ ಸಿಬಂದಿ ಗರ್ಭಿಣಿ, ಮಕ್ಕಳು, ವೃದ್ಧರ ಸಹಿತ ಹಲವರನ್ನು ರಕ್ಷಿಸಿದ್ದಾರೆ. ಆದರೆ ಭಾರೀ ಮಳೆ ಮುನ್ಸೂಚನೆ ಇದ್ದಾಗ್ಯೂ ಸೂಕ್ತ ದೋಣಿ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ಎಡವಿದೆ.

Advertisement

ಅಗ್ನಿಶಾಮಕ ದಳದ ಬಳಿ ಎರಡೇ ದೋಣಿ?
ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಮಲ್ಪೆ ಹಾಗೂ ಕಾರ್ಕಳ ಸಹಿತ ನಾಲ್ಕು ಅಗ್ನಿಶಾಮಕ ಕೇಂದ್ರಗಳಿವೆ. ನೆರೆ ವಿಪತ್ತು ನಿರ್ವಹಣೆಗಾಗಿ ಉಡುಪಿ ಮತ್ತು ಕುಂದಾಪುರಗಳಲ್ಲಿ ತಲಾ ಒಂದು ಬೋಟ್‌ ಇದೆ. ಉಳಿದೆಡೆ ಇಲ್ಲ. ಇತ್ತೀಚೆಗೆ ಭಾರೀ ಮಳೆಯಿಂದ ಮಂಗಳೂರು ತೊಂದರೆ ಅನುಭವಿಸಿದ ನಿದರ್ಶನ ಇದ್ದರೂ ಉಡುಪಿ ಜಿಲ್ಲಾಡಳಿತ ಮಾತ್ರ ಪಾಠ ಕಲಿತಂತಿಲ್ಲ.

ಇದ್ದ ದೋಣಿಗಳಲ್ಲಿ ಒಂದು ದೋಣಿ ಪಡುಬಿದ್ರಿಯಲ್ಲಿ ರಕ್ಷಣಾ ಕಾರ್ಯ ನಿರತವಾಗಿತ್ತು. ಇನ್ನೊಂದನ್ನು ಕುಂದಾಪುರದಿಂದ ತರಿಸಬೇಕಿತ್ತು. ಪಡುಬೆಳ್ಳೆ ಪಾಜಕ ಕ್ಷೇತ್ರದ ಬಳಿ ರಮೇಶ್‌ ಸೇರಿಗಾರ ಎಂಬವರ ಮನೆ ಜಲಾವೃತಗೊಂಡಿದ್ದು ಸ್ಥಳಕ್ಕೆ ಸ್ಥಳೀಯರು ಹಾಗೂ ಬೆಳ್ಳೆ ಗ್ರಾ.ಪಂ. ಸದಸ್ಯರು ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಗ್ನಿಶಾಮಕ ಸಿಬಂದಿ, ಪಿಡಿಒ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದರೂ ದೋಣಿ ವ್ಯವಸ್ಥೆ ಇಲ್ಲದೆ ಕಷ್ಟವಾಯಿತು. ಆ ವೇಳೆಗೆ ಕುಂದಾಪುರದಿಂದ ತರಿಸಿದ ದೋಣಿಯನ್ನೂ ಜಿಲ್ಲಾಡಳಿತದ ಸೂಚನೆಯಂತೆ ನಿಟ್ಟೂರಿಗೆ ಕೊಂಡೊಯ್ಯಲಾಯಿತು.

ಬಾಣಂತಿ, ಮಗು, ಹಿರಿಯರು ಅಪಾಯದಲ್ಲಿದ್ದು ದೋಣಿ ಇಲ್ಲದೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲೂ ಅಧಿಕಾರಿಗಳು, ಸ್ಥಳೀಯರು ರಕ್ಷಣಾ ಕಾರ್ಯಕ್ಕಿಳಿದರು. ಮನೆಯಲ್ಲಿದ್ದ ಪಾರ್ಶ್ವವಾಯು ಪೀಡಿತರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತು ತಂದರೆ, ಬಾಣಂತಿ – ಮಗುವನ್ನು ಲೈಫ್‌ ಜಾಕೆಟ್‌ ಅಳವಡಿಸಿ ರಕ್ಷಿಸಲಾಯಿತು. ಇನ್ನುಳಿದವರನ್ನು ಹಗ್ಗ ಕಟ್ಟಿ ನೀರಿನಲ್ಲಿ ನಡೆಸಿ ರಕ್ಷಿಸಲಾಯಿತು.

ನೀರಿಗಿಳಿದು ರಕ್ಷಿಸಿದ ವಿಎ, ಪಿಡಿಒ
ಎದೆಯವರೆಗೆ ನೀರಿದ್ದರೂ ಮಗು, ವೃದ್ಧರನ್ನು ರಕ್ಷಿಸಲು ನೀರಿಗಿಳಿದ ಬೆಳ್ಳೆ ಪಿಡಿಒ ದಯಾನಂದ ಬೆಣ್ಣೂರ್‌, ವಿಎ ಪ್ರದೀಪ್‌ ಮತ್ತು ಸ್ಥಳೀಯರನ್ನು ಜನತೆ ಶ್ಲಾಘಿಸಿದ್ದಾರೆ.

Advertisement

ಅಗ್ನಿಶಾಮಕ ದಳ
ಇರುವುದು ಎರಡೇ ದೋಣಿ, ಮಾಡುವುದೇನು ಎಂದು ಅಗ್ನಿಶಾಮಕ ಸಿಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆ ಇದ್ದಾಗಲೂ ದೋಣಿ ವ್ಯವಸ್ಥೆ ಮಾಡಲು ಜಿಲ್ಲಾಡ ಳಿತಕ್ಕೆ ಸಾಧ್ಯವಿಲ್ಲವೇ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನ್ಸೂನ್‌ ಪೂರ್ವಸಿದ್ಧತೆ ಸಭೆಯ ಪುರುಷಾರ್ಥ ಏನು ಎಂದು ಜನರು ಪ್ರಶ್ನಿಸುವಂತಾಗಿದೆ.

ಕುಸಿದ ಬಾಣಂತಿ
ಬಾಣಂತಿಯನ್ನು ಲೈಫ್‌ ಜಾಕೆಟ್‌ ಅಳವಡಿಸಿ ನಡೆಸಿಯೇ ಕರೆತರುತ್ತಿದ್ದಾಗ ನೆರೆ ನೀರು ಕಂಡು ಆಕೆ ಹೆದರಿ ಕುಸಿದ ಘಟನೆಯೂ ನಡೆದಿದೆ. ತತ್‌ ಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರು ಆಕೆಯನ್ನು ಎತ್ತಿ ಕರೆತಂದರು. ಕುರ್ಕಾಲು ಪಾಜೈ ಬಳಿಯೂ ಅರ್ಧ ಕಿ.ಮೀ. ದೂರ ತೆರಳಿ ಅಪಾಯದಲ್ಲಿದ್ದ ಎರಡು ಮನೆಯವರನ್ನು ರಕ್ಷಿಸಲಾಗಿದೆ. 

ಅಗ್ನಿಶಾಮಕ ದಳದಲ್ಲಿ ಜಿಲ್ಲೆಯಲ್ಲಿ ಎರಡು ಬೋಟ್‌ಗಳಿವೆ. ತುರ್ತು ಸ್ಥಿತಿಯಲ್ಲಿ ಖಾಸಗಿ ಬೋಟ್‌ ಗಳನ್ನು ತರಿಸಿಕೊಳ್ಳಲಾಗುತ್ತದೆ. ಬೋಟ್‌ ಕೊಂಡೊಯ್ಯಲು ಸಾಧ್ಯವಾಗದೆಡೆ ಹಗ್ಗದ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ವಿಪತ್ತು ನಿರ್ವಹಣೆಗಾಗಿ ಪ್ರಸ್ತುತ ಜಿಲ್ಲೆಗೆ NDRF ಮತ್ತು ನೌಕಾದಳದ ತಂಡಗಳು ಆಗಮಿಸಿವೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ, ಉಡುಪಿ

ಪಡುಬೆಳ್ಳೆ ಸಮೀಪ ನೆರೆನೀರಿನಲ್ಲಿ ಮನೆ ಮುಳುಗಿದ ಸಂದರ್ಭ ಗ್ರಾಮ ಕರಣಿಕ ಪ್ರದೀಪ್‌, ಪಂ. ಸದಸ್ಯ ಸುಧಾಕರ ಪೂಜಾರಿ ಹಾಗೂ ಅಗ್ನಿಶಾಮಕ ದಳದವರ ಸಹಾಯದಿಂದ ಹಗ್ಗ ಬಳಸಿ ಸ್ಥಳೀಯರ ಸಹಕಾರದೊಂದಿಗೆ ಬಾಣಂತಿ, ಮಗು ಮತ್ತು ವೃದ್ಧರನ್ನು ರಕ್ಷಿಸಲು ಸಾಧ್ಯವಾಯಿತು.
-ದಯಾನಂದ ಬೆಣ್ಣೂರ್‌, ಬೆಳ್ಳೆ ಗ್ರಾ.ಪಂ. ಪಿಡಿಒ

— ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next