ನವದೆಹಲಿ: ಮದರಸಾಗಳಲ್ಲಿರುವ ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅವುಗಳನ್ನು ಕೇಂದ್ರ ಅಥವಾ ರಾಜ್ಯ ಮಂಡಳಿಗೆ ಸಂಯೋಜನೆಗೊಳಿಸು ವುದನ್ನು ಕಡ್ಡಾಯಗೊಳಿಸುವ ಪ್ರಸ್ತಾಪ ಇದೆ. “ಮದರಾಸಗಳಲ್ಲಿ ಅತ್ಯುತ್ಕೃಷ್ಟ ಶಿಕ್ಷಣ ಯೋಜನೆ’ (ಎಸ್‌ಪಿಕ್ಯೂಇಎಂ) ಎಂಬ ಹೆಸರಿನಲ್ಲಿ ಅದನ್ನು ಜಾರಿಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳ ವತಿಯಿಂದ ಈ ಬಗ್ಗೆ ಪ್ರಸ್ತಾಪಗಳು ಸಲ್ಲಿಕೆಯಾಗಿವೆ. ಅವುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಬಜೆಟ್‌ನಲ್ಲಿ ನೀಡಲಾಗಿರುವ ಅನುದಾನದಂತೆ ಮದರಸಾ ಶಿಕ್ಷಣ ಆಧುನೀಕರಿಸುವತ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಮದರಸಾಗಳನ್ನು ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆಯಡಿ (ಜಿಪಿಎಸ್) ತರುವ ಪ್ರಸ್ತಾಪವೂ ಕೇಂದ್ರದ ಮುಂದೆ ಇದೆ. ಸಮಗ್ರ ಶಿಕ್ಷಾ ಅಭಿಯಾನ ಯೋಜನೆಯಡಿ ಮುಸ್ಲಿಮರೇ ಹೆಚ್ಚಾಗಿರುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆಯುವ ಯೋಜನೆ ಕೂಡ ಕೇಂದ್ರಕ್ಕಿದೆ.
“ರಾಷ್ಟ್ರೀಯ ಮಟ್ಟದಲ್ಲಿಯೂ ಮದರಸಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿ ನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಶಿಕ್ಷಣ ಜತೆಗೆ ಸಾಂಪ್ರದಾಯಿಕ ಶಿಕ್ಷಣ ವಿಷಯ(ವಿಜ್ಞಾನ, ಗಣಿತ, ಸಮಾಜ ಅಧ್ಯಯನ ಇತ್ಯಾದಿ)ಗಳಲ್ಲಿಯೂ ಗುಣಮಟ್ಟ ಶಿಕ್ಷಣ ಪಡೆಯುವಂಥ ವ್ಯವಸ್ಥೆ ಅದಾಗಲಿದೆ. ಇದರ ಜತೆಗೆ ರಾಜ್ಯ ಸರ್ಕಾರ ಅಥವಾ ಮದರಸಾ ಮಂಡಳಿಗೆ ನಿಗದಿತ ಶಿಕ್ಷಣ ಕೇಂದ್ರವನ್ನು ಸಂಯೋಜನೆ (ಎಫಿಲಿಯೇಷನ್) ಮಾಡಬೇಕು’ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.