ಬೆಂಗಳೂರು: ಬಿಬಿಎಂಪಿ ಬಿಲ್ ಬಾಕಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಬಿಸಿಬಿಸಿ ಚರ್ಚೆ ನಡೆದಿದ್ದು, ತನಿಖಾ ವರದಿ ಬರುವವರೆಗೂ ಬಿಲ್ ಪಾವತಿ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ವಿವಾದವನ್ನು ಮುಂದುವರಿಸಿದರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂದು ಬೆಂಗಳೂರು ನಗರದ ಕೆಲವು ಸಚಿವರು ಕಳವಳ ವ್ಯಕ್ತಪಡಿಸಿದರು ಎನ್ನಲಾಗಿದೆ. ಗುತ್ತಿಗೆದಾರರಲ್ಲಿ ಕಾಂಗ್ರೆಸ್ ಪರವಾಗಿರುವವರೂ ಇದ್ದಾರೆ. ಹೀಗಾಗಿ ಈ ವಿವಾದವನ್ನು ಮತ್ತಷ್ಟು ಕಾಲ ಮುಂದುವರಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.
ಆದರೆ ಇದಕ್ಕೆ ಒಪ್ಪದ ಡಿ.ಕೆ.ಶಿವಕುಮಾರ್, ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ಕುರಿತು ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಇನ್ನೊಂದು ತಿಂಗಳಲ್ಲೇ ವರದಿ ಬರಲಿದೆ. ಬಳಿಕ ಬಿಜೆಪಿ ಸರಕಾರದ ಬಂಡವಾಳ ಬಯಲಾಗುತ್ತದೆ. ಅದನ್ನು ಜನರ ಮುಂದಿಡಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಈ ಅಂಶವನ್ನು ಜನರ ಗಮನಕ್ಕೆ ತರಲೂ ತೀರ್ಮಾನಿಸಲಾಗಿದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯುವುದು ಬೇಡ ಎಂದು ಸ್ಪಷ್ಟ ನಿಲುವು ವ್ಯಕ್ತಪಡಿಸಿದರು ಎನ್ನಲಾಗಿದೆ.
ವಿಪಕ್ಷಗಳು ಒಂದಿಲ್ಲೋಂದು ವಿಷಯ ಇಟ್ಟುಕೊಂಡು ಸರಕಾರದ ಮೇಲೆ ಮುಗಿಬೀಳುತ್ತಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ತಿರುಗೇಟು ನೀಡಬೇಕು. ಗುತ್ತಿಗೆದಾರರ ಕಮಿಷನ್ ಆರೋಪ ವಿಚಾರ, ಕೃಷಿ ಸಚಿವರ ವಿರುದ್ಧದ ಪತ್ರ, ಶಾಸಕರ ಸಹಿ ಸಂಗ್ರಹ ಮತ್ತು ಅಧಿಕಾರಿಗಳ ವರ್ಗಾವಣೆ ಹೀಗೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಅನೌಪಚಾರಿಕ ಚರ್ಚೆ ನಡೆಯಿತು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೀಕಾಪ್ರಹಾರಕ್ಕೆ ಮೃದು ಧೋರಣೆ ತಾಳದೆ ರಾಜಕೀಯವಾಗಿ ತಿರುಗೇಟು ಕೊಡಬೇಕು. ಕೃಷಿ ಇಲಾಖೆ ಅಧಿಕಾರಿಗಳ ದೂರು ಮತ್ತು ರಾಜಭವನದ ಪ್ರತಿಕ್ರಿಯೆಯ ಬೆಳವಣಿಗೆಯಲ್ಲಿ ತನಿಖೆ ನಡೆದಿದ್ದು, ಪತ್ರವನ್ನು ಮೂರನೇ ವ್ಯಕ್ತಿ ಬರೆದಿ¨ªಾರೆ. ರಾಜಭವನವನ್ನು ಈ ವಿಷಯದಲ್ಲಿ ಬಳಸಿಕೊಳ್ಳಲಾಗಿದೆ. ಈಗ ಪತ್ರದ ಬಗ್ಗೆ ತನಿಖೆ ನಡೆದಿದ್ದು, ಬಹುತೇಕ ಅದು ನಕಲಿಯಾಗಿದೆ. ಈ ಅಂಶವನ್ನು ಜನರ ಮುಂದಿಟ್ಟು ಜೆಡಿಎಸ್ ಬಣ್ಣ ಬಯಲು ಮಾಡಬೇಕು ಎಂದು ಸಚಿವರಿಗೆ ತಿಳಿಸಲಾಗಿದೆ.