ಜೇವರ್ಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಹೊಂದಿಕೊಂಡಿರುವ ಜೆಸ್ಕಾಂ ಕಚೇರಿ ಎಡ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ವಸತಿ ಗೃಹಗಳು ಮೂಲಸೌಕರ್ಯ ಇಲ್ಲದ ಪರಿಣಾಮ ಸಿಬ್ಬಂದಿ ಪರದಾಡುವಂತಾಗಿದೆ. ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ನೂರಕ್ಕೂ ಅಧಿಧಿಕ ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ 15 ವಸತಿ ಗೃಹಗಳನ್ನು ಮಾತ್ರ ಇಲ್ಲಿ ನಿರ್ಮಾಣ ಮಾಡಲಾಗಿದೆ. ಬಹುತೇಕ ಸಿಬ್ಬಂದಿ ಬಾಡಿಗೆ ಹಾಗೂ ಸ್ವಂತ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಿರ್ಮಿಸಲಾಗಿರುವ ವಸತಿ ಗೃಹಗಳು ನಿರ್ವಹಣೆ ಇಲ್ಲದೇ ಹಾಳುಕೊಂಪೆಯಾಗಿ ಮಾರ್ಪಟ್ಟಿವೆ. ಹಾಳಾದ ರಸ್ತೆ, ಚರಂಡಿ, ಬೀದಿ ದೀಪ ವ್ಯವಸ್ಥೆ ಹಾಗೂ ಮನೆಗಳು ಸುಣ್ಣ ಬಣ್ಣ ಕಾಣದೇ ಹಲವಾರು ವರ್ಷಗಳು ಕಳೆದಿವೆ.
ವಸತಿ ಗೃಹಗಳ ಸುತ್ತ ದಟ್ಟವಾಗಿ ಜಾಲಿ ಕಂಟಿಬೆಳೆದ ಪರಿಣಾಮ ವಿಷ ಜಂತುಗಳಿಗೆ ಆಶ್ರಯತಾಣವಾಗಿದೆ. ಮನೆಗಳ ಗೋಡೆ, ಮೇಲ್ಛಾವಣಿ ಬಿರುಕು ಬಿಟ್ಟು ಈಗಲೋ ಆಗಲೋ ಬೀಳುವ ಹಂತದಲ್ಲಿದೆ. ಪ್ರತಿ ವರ್ಷ ವಸತಿ ಗೃಹಗಳ ನಿರ್ವಹಣೆಗೆ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾಗುತ್ತದೆ. ಆದರೆ ಅಗತ್ಯ ಸೌಕರ್ಯ ಒದಗಿಸಲಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ತಿಳಿಸಿದ್ದಾರೆ.
ಅಲ್ಲದೇ ವಸತಿ ಗೃಹಗಳ ಸುತ್ತ ಇರುವ ಕಾಂಪೌಂಡ್ ಗೋಡೆ ಬಿದ್ದು ಹೋದರೂ ಇಲ್ಲಿಯವರೆಗೂ ನಿರ್ಮಾಣ ಮಾಡಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ಪುಂಡ ಪೋಕರಿಗಳ ಅನೈತಿಕ ಚಟುವಟಿಗಳ ತಾಣವಾಗಿ ಮಾರ್ಪಟ್ಟಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳಲ್ಲಿ ಬಳಕೆ ಮಾಡಿದ ನೀರು ರಸ್ತೆ ಹಾಗೂ ತಗ್ಗುಗಳಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ.
ಇದರ ಪರಿಣಾಮ ಜೆಸ್ಕಾಂ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ರೋಗಭೀತಿಯಿಂದ ನರಳುವಂತಾಗಿದೆ. ಇತ್ತೀಚೆಗೆ ಇಲ್ಲಿನ ವಾತಾವರಣಕ್ಕೆ ಬೇಸತ್ತು ಸಿಬ್ಬಂದಿ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯವಾಗಿ ಜೆಸ್ಕಾಂ ಕಚೇರಿಯಲ್ಲಿಯೂ ಅನೇಕ ಸಮಸ್ಯೆಗಳ ಮಧ್ಯೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶುದ್ಧ ಕುಡಿಯುವ ನೀರು, ಶೌಚಾಲಯ ಇಲ್ಲದ ಪರಿಣಾಮ ಮಹಿಳಾ ಸಿಬ್ಬಂದಿ ಮರಗಿಡಗಳಿಗೆ ಆಸರೆ ಹೋಗುವಂತಾಗಿದೆ. ಮೇಲ್ಛಾವಣಿಗಳು ಬಿರುಕು ಬಿಟ್ಟು ಬೀಳುವ ಹಂತದಲ್ಲಿವೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಸಿಬ್ಬಂದಿ ವಾಸ ಮಾಡುವ ಮನೆಗಳಿಗೆ ಹಾಗೂ ಕರ್ತವ್ಯ ನಿರ್ವಹಿಸುವ ಕಚೇರಿಗೆ ಮೂಲಸೌಕರ್ಯ ಒದಗಿಸಿ ಕೊಡಬೇಕು ಎಂದು ಹಾಲುಮತ ಜಾಗೃತಿ ಪ್ರತಿಷ್ಠಾನದ ತಾಲೂಕು ಘಟಕದ ಅಧ್ಯಕ್ಷ ಲಿಂಗರಾಜ ಮಾಸ್ಟರ್ ಆಗ್ರಹಿಸಿದ್ದಾರೆ.
* ವಿಜಯಕುಮಾರ ಎಸ್.ಕಲ್ಲಾ