ಹುಬ್ಬಳ್ಳಿ: ಕಳೆದ 15 ವರ್ಷಗಳ ಕಾಲ ಸಾರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ಸಂಸ್ಥೆಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ಮಹಾನಗರದ ಜನತೆಗೆ ಎಂದಿನಂತೆ ಮೂರು ವ್ಯವಸ್ಥೆಗಳಿಂದ ಬಸ್ ಸಾರಿಗೆ ಸೇವೆ ದೊರೆಯಲಿದೆ. ಆದರೆ ಅವಳಿ ನಗರದ ನಡುವೆ ಸಂಚಾರ ಮತ್ತಷ್ಟು ಹೆಚ್ಚಲಿದೆ.
ಅವಳಿ ನಗರದ ಜನತೆಗೆ ಉತ್ತಮ ಹಾಗೂ ತ್ವರಿತ ಸೇವೆ ನೀಡುವ ನಿಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿ ಸರಕಾರ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಳಿಸಿತು. ನಗರದ ಸಂಚಾರ ದಟ್ಟಣೆ ಹಾಗೂ ಚಿಗರಿ ಬಸ್‌ಗಳ ಆರ್ಥಿಕ ನಷ್ಟದ ದೃಷ್ಟಿಯಿಂದ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ (ಪರ್ಮೀಟ್) ರದ್ದುಗೊಳಿಸುವ ಇರಾದೆ ಸರಕಾರದ್ದಾಗಿತ್ತು. ಈ ನಿಟ್ಟಿನಲ್ಲಿ ಬಿಆರ್‌ಟಿಎಸ್ ಕೂಡ ಸರಕಾರಕ್ಕೆ ಮನವಿ ಮಾಡಿತ್ತು. 2019 ಜೂನ್ ಅಂತ್ಯಕ್ಕೆ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ಅಂತ್ಯಗೊಳ್ಳಲಿತ್ತು. ಸರಕಾರ ಪರವಾನಗಿ ನವೀಕರಣಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಬೇಂದ್ರೆ ಸಾರಿಗೆ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಾತ್ಕಾಲಿಕ ಪರ್ಮಿಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭಿಕ ಹಿನ್ನಡೆ: ಈಗಾಗಲೇ ನಷ್ಟದಲ್ಲಿ ಸಾಗುತ್ತಿರುವ ಬಿಆರ್‌ಟಿಎಸ್ ಚಿಗರಿ ಸೇವೆಗೆ ಇದು ಆರಂಭಿಕ ಹಿನ್ನಡೆಯಾದಂತಾಗಿದೆ. ಜೂನ್ ಅಂತ್ಯಕ್ಕೆ ಬೇಂದ್ರೆ ಸಾರಿಗೆ ಸಂಪೂರ್ಣ ಬಂದಾಗಲಿದ್ದು, ಆ ಸಾರಿಗೆ ನೆಚ್ಚಿಕೊಂಡುವರು ಚಿಗರಿ ಬಸ್ ಹತ್ತಲಿದ್ದಾರೆ, ಒಂದಿಷ್ಟು ಆದಾಯದ ಚೇತರಿಕೆ ಕಾಣಲಿದೆ ಎಂದು ನಿರೀಕ್ಷೆಯಲ್ಲಿದ್ದ ವಾಯವ್ಯ ಸಾರಿಗೆ ಸಂಸ್ಥೆಗೆ ನಿರಾಸೆಯಾದಂತಾಗಿದೆ. ಮುಂದಿನ ನಾಲ್ಕು ತಿಂಗಳು ವಾಯವ್ಯ ಸಾರಿಗೆ ಹಾಗೂ ಚಿಗರಿ ಬಸ್‌ಗೆ ಬೇಂದ್ರೆ ಸವಾಲೊಡ್ಡಲಿದೆ. ಬೇಂದ್ರೆ ಸಾರಿಗೆ 41 ಬಸ್‌ಗಳಿಂದ ನಿತ್ಯ ಕನಿಷ್ಠ 500 ಟ್ರಿಪ್‌ಗ್ಳು ಸಂಚರಿಸಲಿದ್ದು, ಈ ಆದಾಯವನ್ನು ಚಿಗರಿ ಸಾರಿಗೆಯತ್ತ ಸೆಳೆಯುವುದು ಹು-ಧಾ ನಗರ ಸಾರಿಗೆ ವಿಭಾಗದ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಹೆಚ್ಚಲಿದೆ ಸಂಚಾರ ದಟ್ಟಣೆ: ಅವಳಿ ನಗರದ ನಡುವಿನ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು. ಐಷಾರಾಮಿ ಬಸ್‌ಗಳನ್ನು ಪರಿಚಯಿಸುವುದರ ಮೂಲಕ ಸಮೂಹ ಸಾರಿಗೆ ವ್ಯವಸ್ಥೆಗೆ ಜನರನ್ನು ಆಕರ್ಷಿಸಬೇಕೆಂಬುದು ಬಿಆರ್‌ಟಿಎಸ್ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಇದೀಗ ಬೇಂದ್ರೆ ಸಾರಿಗೆಯ 41 ಬಸ್‌ಗಳು ಸಂಚರಿಸುವುದರಿಂದ ಇದಕ್ಕೆ ಪೈಪೋಟಿಯಾಗಿ ವಾಯವ್ಯ ಸಾರಿಗೆ ಸಂಸ್ಥೆಯ ನಗರ ಸಾರಿಗೆ ವಿಭಾಗದ ಬಸ್‌ಗಳು ಕೂಡ ಮಿಶ್ರಪಥದಲ್ಲಿ ಸಂಚರಿಸಲಿವೆ. ಬೇಂದ್ರೆ ಸಾರಿಗೆಯೊಂದಿಗೆ ಪೈಪೋಟಿಗಾಗಿ ನಗರ ಸಾರಿಗೆ ವಿಭಾಗದಿಂದ ಕನಿಷ್ಠ 45-50 ಬಸ್‌ಗಳು ಸಂಚರಿಸುವ ಸಾಧ್ಯತೆಗಳಿವೆ. ಹೀಗಾಗಿ ಮಿಶ್ರಪಥ ಎಂಬುದು ಬಸ್‌ಗಳ ಮಾರ್ಗವಾಗಲಿದ್ದು, ಇತರೆ ವಾಹನಗಳ ಚಾಲನೆ ದುಸ್ತರವಾಗಲಿದೆ.
ಚಿಗರಿಗೆ ಹೊಡೆತ: ಬೇಂದ್ರೆಗೆ ಪೈಪೋಟಿಗೆ ನೀಡುವ ನಿಟ್ಟಿನಲ್ಲಿನ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳನ್ನು ಹೆಚ್ಚಿಸಿದರೆ ಇದು ನೇರವಾಗಿ ಚಿಗರಿ ಸಾರಿಗೆ ವ್ಯವಸ್ಥೆಗೆ ನೇರ ಹೊಡೆತ ಬೀಳುವ ಸಾಧ್ಯತೆಗಳೇ ಹೆಚ್ಚು. ವಾಹನಗಳನ್ನು ದಾಟಿಕೊಂಡು ಬಿಆರ್‌ಟಿಎಸ್ ಬಸ್ ನಿಲ್ದಾಣಕ್ಕೆ ತೆರಳಲು ವೃದ್ಧರು, ಮಹಿಳೆಯರಿಗೆ ಅಷ್ಟೊಂದು ಸುಲಭವಲ್ಲದ ಪರಿಣಾಮ ಐಷಾರಾಮಿ ಬಸ್‌ಗಳಿದ್ದರೂ ಸಾಮಾನ್ಯ ಬಸ್‌ಗಳ ಸಂಚಾರಕ್ಕೆ ಮೊರೆ ಹೋಗಿದ್ದಾರೆ. ಈ ಬಸ್‌ಗಳು ಹಿಂದಿನ ನಿಲುಗಡೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಕೆಲ ಭಾಗದ ಜನರು ಇನ್ನೂ ಚಿಗರಿಯತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಚಿಗರಿ ಸೇವೆಗೆ ಹಿನ್ನಡೆಯಾಗಲು ಕಾರಣವಾಗಿವೆ. ಇಂತಹ ಹಲವು ಕಾರಣಗಳಿಂದ ಐಷಾರಾಮಿ ಬಸ್‌ಗಳ ಸೇವೆ ಸಾಮಾನ್ಯ ಬಸ್‌ಗಳ ದರದಲ್ಲಿ ಸಿಗುತ್ತಿರುವುದರಿಂದ ಬೇಂದ್ರೆ ಹಾಗೂ ವಾಯವ್ಯ ಸಾರಿಗೆ ಬಸ್ ಪ್ರಯಾಣದಲ್ಲಿ ಗಮನಾರ್ಹ ವ್ಯತ್ಯಾಸಗಳು ಕಾಣುತ್ತಿಲ್ಲ.
ಮುಂದಿನ ನಾಲ್ಕು ತಿಂಗಳಿಗೆ ಬೇಂದ್ರೆ ಸಾರಿಗೆ ತಾತ್ಕಾಲಿಕ ಪರ್ಮಿಟ್ ದೊರೆಯಲಿದೆ. ಹೀಗಾಗಿ ಇನ್ನೇನು ಬೇಂದ್ರೆ ಸಾರಿಗೆ ನಿಂತೇ ಹೋಯ್ತೆನ್ನುವ ಹಂತದಲ್ಲಿರುವಾಗ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ. ಮುಂದಿನ ಐದು ವರ್ಷಗಳ ಪರವಾನಗಿ ಪಡೆಯಲು ಮುಂದಾಗಿದ್ದು, ಈ ಪರವಾನಗಿ ದೊರೆತರೆ ಚಿಗರಿ ಸ್ಥಿತಿ ಹೇಗೆಂಬ ಆತಂಕವೂ ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿದೆ.