Advertisement

ಬೆಂಗಳೂರು ಕೇಂದ್ರ, ಉತ್ತರ ವಿವಿ ಯಾರಿಗೂ ಬೇಡ

10:45 AM Jul 21, 2018 | |

ಬೆಂಗಳೂರು: ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆ ಮಾಡಿದ್ದರೂ, ಹೊಸದಾಗಿ ಹುಟ್ಟಿಕೊಂಡಿರುವ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿವಿಯಲ್ಲಿನ ಸ್ನಾತಕೋತ್ತರ ಕೋರ್ಸ್‌ ಸೇರಿಕೊಳ್ಳಲು ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ವಿವಿಯಲ್ಲಿ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳು ಆರಂಭಿಸಲಾಗುತ್ತಿದೆ. ಬೆಂಗಳೂರು ವಿವಿ ಸಹಿತವಾಗಿ ಮೂರು ವಿವಿಗಳು ತಮ್ಮ ವ್ಯಾಪ್ತಿಯ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಇಷ್ಟಾದರೂ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸೇರಿಕೊಳ್ಳಲು ಇಚ್ಛಿಸುತ್ತಿದ್ದಾರೆ.

ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಮೂರು ವಿವಿಗಳು ಪ್ರಸಕ್ತ ಸಾಲಿನಿಂದ ನೀಡುತ್ತಿವೆ. ಬೆಂಗಳೂರು ಕೇಂದ್ರ ವಿವಿಯ ಆಡಳಿತ ಕಚೇರಿ ಸೆಂಟ್ರಲ್‌ ಕಾಲೇಜಿನಲ್ಲಿದ್ದು, ಬೆಂ.ಉತ್ತರ ವಿವಿಯ ಆಡಳಿತ ಕಚೇರಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟಮಕದಲ್ಲಿದೆ. ಮೂರು ವಿವಿ ವ್ಯಾಪ್ತಿಗೂ ತಲಾ 250 ಕಾಲೇಜುಗಳು ಸೇರಿವೆ.

ಬೆಂ.ವಿವಿಯತ್ತ ಹೆಚ್ಚಿನವರ ಚಿತ್ತ: 2018-19ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಬೆಂಗಳೂರು ವಿವಿ ನೀಡುವ ವಿವಿಧ ಕೋರ್ಸ್‌ಗಳಿಗೆ 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಬೆಂ.ಕೇಂದ್ರ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 3170 ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ಬೆಂ. ಉತ್ತರ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 1500 ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ.

ಉತ್ತರ ವಿವಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೇಂದ್ರ ವಿವಿಯಲ್ಲಿ ವಾಣಿಜ್ಯ ಮತ್ತು ವಿಜ್ಞಾನಕ್ಕೆ ಅಧಿಕ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದಾರೆ. ಬೆಂಗಳೂರು ವಿವಿಯಲ್ಲಿ ವಾಣಿಜ್ಯ ಮತ್ತು ವಿಜ್ಞಾನದ ಜತೆಗೆ ಕಲಾ ವಿಭಾಗದ ವಿವಿಧ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಿದೆ.

Advertisement

ಸೌಕರ್ಯದ ಕೊರತೆ
ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಆಯ್ಕೆಗೆ ಹೆಚ್ಚಿನ ಅವಕಾಶ ಇರುವುದರಿಂದ ಅರ್ಜಿಗಳು ಜಾಸ್ತಿ ಬಂದಿವೆ. ಬೆಂ.ಕೇಂದ್ರ ಮತ್ತು ಬೆಂ.ಉತ್ತರ ವಿವಿಯಲ್ಲಿ ಅಭ್ಯರ್ಥಿಗಳಿಗೆ ಕೋರ್ಸ್‌ ಆಯ್ಕೆ ಸೀಮಿತವಾಗಿದೆ. ಹೊಸ ವಿವಿ ಆಗಿರುವುದರಿಂದ ಮೂಲ ಸೌಕರ್ಯ ಸೇರಿದಂತೆ ಎಲ್ಲ ಅವಶ್ಯಕತೆಗಳು, ಬೋಧಕ, ಬೋಧಕೇತರ ಸಿಬ್ಬಂದಿ ಕೂಡ ಪೂರ್ಣ ಪ್ರಮಾಣದಲ್ಲಿ ಇಲ್ಲ. ಸರ್ಕಾರ ಇನ್ನೂ ಪೂರ್ಣ ಪ್ರಮಾಣದ ಅನುದಾನ ನೀಡಿಲ್ಲ. ಹೀಗಾಗಿ ಹೊಸ ವಿವಿ ಸೇರಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ.

ಕೋಲಾರ ಸ್ನಾತಕೋತ್ತರ ಕೇಂದ್ರಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬೆಂ.ಉತ್ತರ ವಿವಿ ವ್ಯಾಪ್ತಿಯ ಪಿಜಿ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಇನ್ನಷ್ಟು ಅರ್ಜಿ ಬರುವ ನಿರೀಕ್ಷೆ ಇದೆ. 
  ಡಾ.ಟಿ.ಡಿ.ಕೆಂಪರಾಜು, ಬೆಂ.ಉತ್ತರ ವಿವಿ ಕುಲಪತಿ

ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಷ್ಟು ಒಳ್ಳೆಯದು. ಹೊಸ ವಿವಿಗಳು ಸಮರ್ಥವಾಗಿ ಬೆಳೆಯಲು ಇನ್ನೂ ಕೆಲವು ವರ್ಷ ಬೇಕಾಗುತ್ತದೆ.
  ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿವಿ ಕುಲಪತಿ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next