Advertisement

ಮಹಿಳೆ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌

01:10 AM Jul 02, 2019 | Team Udayavani |

ಬೆಂಗಳೂರು: ಮಣಿಪಾಲ್‌ ಎಜುಕೇಷನ್‌ ಮತ್ತು ಮೆಡಿಕಲ್‌ ಗ್ರೂಪ್‌(ಎಂಇಎಂಜಿ)ಗೆ 70 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಏಳನೇ ಆರೋಪಿ ಚೆನ್ನೈ ಮೂಲದ ಎಸ್‌.ಬಾಲಂಬಲ್‌ಗೆ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಿದೆ.

Advertisement

ಇದೇ ವೇಳೆ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರನೇ ಆರೋಪಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸಂದೀಪ್‌ ಗುರುರಾಜ್‌ ಸಂಬಂಧಿ ಕಾರ್ತಿಕ್‌ ಪಾಂಡುರಂಗಿಯನ್ನು ಘೋಷಿತ ಅಪರಾಧಿ ಎಂದು ಆದೇಶಿಸಿದೆ.

ಚೆನ್ನೈ ಮೂಲದ ಬಾಲಂಬಲ್‌ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸಂದೀಪ್‌ ಗುರುರಾಜ್‌ ಆತ್ಮೀಯರಾಗಿದ್ದು, ಎರಡೂವರೆ ಕೋಟಿ ರೂ. ಅನ್ನು ಸಂದೀಪ್‌ ಗುರುರಾಜ್‌ ಆಕೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ.

ಕೃತ್ಯಕ್ಕೂ ಕೆಲ ದಿನಗಳ ಮೊದಲು ಆರೋಪಿ ಗುರುರಾಜ್‌ ಚೆನ್ನೈನ ರೆಸಾರ್ಟ್‌ವೊಂದರಲ್ಲಿ ಬಾಲಂಬಲ್‌ ಹಾಗೂ ಆಕೆಯ ಪತಿಯನ್ನು ಭೇಟಿಯಾಗಿ ಕೆಲ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, ಬೆಂಗಳೂರು ಮತ್ತು ಚೆನ್ನೈನ ಕೆಲವಡೆ ಹೂಡಿಕೆ ಕೂಡ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಅಲ್ಲದೆ, ಆರೋಪಿ ಕೊಟ್ಟ ಹಣವನ್ನು ಷೇರುಮಾರುಕಟ್ಟೆಯಲ್ಲೂ ಹೂಡಿಕೆ ಮಾಡಿದ್ದಾಳೆ. ಬೆಂಗಳೂರಿನಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತೆ ಚೆನ್ನೈ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಳು. ಆದರೆ, ವಿಚಾರಣೆ ನಡೆಸಿದ ಕೋರ್ಟ್‌ ರಾಜ್ಯದ ನ್ಯಾಯಾಲಕ್ಕೆ ನಿರ್ದೇಶನ ನೀಡಿತ್ತು ಎಂದು ಪೊಲೀಸರು ಹೇಳಿದರು.

Advertisement

ಎಂಇಎಂಜಿಯಲ್ಲಿ ಡೆಪ್ಯೂಟಿ ಜನರಲ್‌ ಮ್ಯಾನೆಜರ್‌ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸಂದೀಪ್‌ ಗುರುರಾಜ್‌ 70 ಕೋಟಿ ರೂ. ಅಧಿಕ ವಂಚನೆ ಮಾಡಿದ್ದ. ಸಂಸ್ಥೆಯ ಲೆಕ್ಕಪರಿಶೋಧನೆ ವೇಳೆ ವಂಚನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಡಿ.26ರಂದು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಸಂದೀಪ್‌ ಗುರುರಾಜ್‌, 2ನೇ ಆರೋಪಿ ಚಾರುಸ್ಮಿತ, ಅಮ್ರಿತಾ ಚಂಗಪ್ಪ ಹಾಗೂ ಮೀರಾ ಚಂಗಪ್ಪರನ್ನು ಬಂಧಿಸಿದ್ದು, ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ಮೂರನೇ ಆರೋಪಿ ವಿಶಾಲ್‌ ಸೋಮಣ್ಣ ತಲೆಮರೆಸಿಕೊಂಡಿದ್ದಾನೆ. ಹೆಚ್ಚಿನ ತನಿಖೆ ವೇಳೆ ಬಾಲಂಬಲ್‌ ಹಾಗೂ ಕಾರ್ತಿಕ್‌ ಪಾಂಡುರಂಗಿ ಪಾತ್ರ ಬಯಲಾಗಿತ್ತು ಎಂದು ಪೊಲೀಸರು ಹೇಳಿದರು.

ಪೇದೆ ಅಮಾನತು: ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆಗೂ ಮೊದಲು ಠಾಣೆಯಲ್ಲಿದ್ದ ಚಾರ್ಜ್‌ಶೀಟ್‌ನ ಕೆಲ ಪುಟಗಳನ್ನು ಠಾಣೆಯ ಸಿಬ್ಬಂದಿ ಕಿರಣ್‌ ಕುಮಾರ್‌ ಕಳವು ಮಾಡಿದ್ದರು. ಪ್ರಮುಖ ಆರೋಪಿಯ ಹಣದ ಆಮಿಷವೊಡ್ಡಿದರಿಂದ ಕಿರಣ್‌ ಕುಮಾರ್‌ ಕೃತ್ಯ ಎಸಗಿದ್ದರು. ಈ ವಿಚಾರ ತಿಳಿದ ಠಾಣೆಯ ಹಿರಿಯ ಅಧಿಕಾರಿಗಳನ್ನು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಸಾಧ್ಯತೆ: ಆರೋಪಿ ಸಂದೀಪ್‌ ಗುರುರಾಜ್‌ನ ಹತ್ತಿರ ಸಂಬಂಧಿ ಆಗಿರುವ ಕಾರ್ತಿಕ್‌ ಪಾಂಡುರಂಗಿ ಕೋಟ್ಯಂತರ ರೂ. ಲಾಭ ಪಡೆದುಕೊಂಡಿದ್ದು, ಸದ್ಯ ವಿದೇಶದಲ್ಲಿ(ದುಬೈ ಎಂದು ಹೇಳಲಾಗಿದೆ) ತಲೆಮರೆಸಿಕೊಂಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕೋರ್ಟ್‌ ಘೋಷಿತ ಅಪರಾಧಿ ಎಂದು ಆದೇಶಿಸಿದ್ದು, ಸದ್ಯದಲ್ಲೇ ಆತನ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡಲು ಸಿದ್ದತೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next