ಬೆಂಗಳೂರು: ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಎರಡನೇ ಆರೋಪಿ ವಸೀಂ ಅಹಮದ್ ಮೂರು ತಿಂಗಳ ತಾತ್ಕಾಲಿಕ ಜಾಮೀನು ನೀಡಲು ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ವಸೀಂ ಅಹಮದ್, ಎಡಕಾಲಿನ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಲುವಾಗಿ ಮೂರು ತಿಂಗಳ ಅವಧಿಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆರೋಪಿ ವಸೀಂ ಅಹಮದ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು, ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಆರೋಪಿ ವಿರುದ್ಧ ಗಂಭೀರ ಆರೋಪವಿದೆ. ಜತೆಗೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡುವ ನುರಿತ ವೈದ್ಯರಿಲ್ಲ. ಜತೆಗೆ, ಯಂತ್ರೋಪಕರಣಗಳಿಲ್ಲ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.ಆರೋಪಿ ಮೊಣಕಾಲು ಶಸ್ತ್ರಚಿಕಿತ್ಸೆೆ ಸಂಬಂಧಿಸಿದಂತೆ ಮುಂದಿನ ಹತ್ತುದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.
ಎನ್‌ಐಎ ಪರ ವಿಶೇಷ ಅಭಿಯೋಜಕರಾಗಿ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಆರೋಪಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಅನ್ವಯ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ರುದ್ರೇಶ್‌ರನ್ನು ಮಚ್ಚಿನಿಂದ ಹೊಡೆದ ಆರೋಪಿ ಇವರೇ ಆಗಿದ್ದಾರೆ.ಆರೋಪಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ.ಆದರೆ, ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಆರೋಪಿಗಳ ಸಂಚು ಬರೀ ರುದ್ರೇಶ್‌ರನ್ನು ಹತ್ಯೆ ಮಾಡುವುದಷ್ಟೇ ಅಲ್ಲದೆ ಹಿಂದೂ ಮುಖಂಡರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಆರೋಪಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಲಕ್ಕೆ ಮನವಿ ಮಾಡಿದ್ದರು.
ಕಮರ್ಷಿಯಲ್ ಸ್ಟ್ರೀಟ್‌ನ ಶಿವಾಜಿ ಸರ್ಕಲ್‌ನಲ್ಲಿ 2016 ಅ. 16ರಂದು ನಡೆದ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಅವರ ಭೀಕರ ಹತ್ಯೆ ನಡೆದಿತ್ತು. ಎನ್‌ಐಎ ಪಿಎಫ್ಐ ಸಂಘಟನೆಯ ಐವರು ಆರೋಪಿಗಳಾದ ಇರ್ಫಾನ್ ಪಾಶಾ, ವಸೀಂ ಅಹಮದ್, ಮೊಹಮದ್ ಸಾದಿಕ್, ಮೊಹಮದ್ ಮುಜೀಬುಲ್ಲಾ ಹಾಗೂ ಆಸೀಂ ಷರೀಪ್ ಅವರನ್ನು ಬಂಧಿಸಲಾಗಿತ್ತು.