ಬೆಂಗಳೂರು: ಹೈಕೋರ್ಟ್ ಸಿಬ್ಬಂದಿ ವೇತನ ಹಾಗೂ ಪಿಂಚಣಿ ನಿಗದಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಹೈಕೋರ್ಟ್ ಸಿಬ್ಬಂದಿ ವೇತನ ನಿಗದಿ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸೂಕ್ತ ತೀರ್ಮಾನ ಕೈಗೊಳ್ಳದಿರುವ ರಾಜ್ಯಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಹೈಕೋರ್ಟ್ ಸಿಬ್ಬಂದಿ ವೇತನ ಹೆಚ್ಚಳ ಕುರಿತು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಪಾಲಿಸದ ರಾಜ್ಯಸರ್ಕಾರದ ವಿರುದ್ಧ ನಿಜಗುಣಿ ಎಂ ಕರಡಿಗುಡ್ಡ ಹಾಗೂ ಹೈಕೋರ್ಟ್ ನೌಕರರ ಸಂಘ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಹಾಗೂ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ಹಂತದಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಕ್ರಿಯೆಗಳನ್ನು ಕೈಬಿಡಲು ಸಾಧ್ಯವಿಲ್ಲ. ಸಿಬ್ಬಂದಿಯ ವೇತನ ಪರಿಷ್ಕರಣೆ ಸಂಬಂಧ ತಮ್ಮ ನಿಲುವೇನು ಎಂಬುದನ್ನು ತಿಳಿಸಿ ಎಂದು ನಿರ್ದೇಶನ ನೀಡಿದ್ದು, ಆಗಸ್ಟ್ 22ಕ್ಕೆ ವಿಚಾರಣೆ ಮುಂದೂಡಿ ನ್ಯಾಯಾಂಗ ನಿಂದನೆ ಅರ್ಜಿ ಕೈ ಬಿಡುವಂತೆ ರಾಜ್ಯಸರ್ಕಾರ ಸಲ್ಲಿಸಿದ್ದ ಎರಡು ಅಫಿಡೆವಿಟ್‌ಗಳನ್ನು ತಿರಸ್ಕರಿಸಿದೆ.
ಹೈಕೋರ್ಟ್ ಸಿಬ್ಬಂದಿಯ ಸುದೀರ್ಘ ಕಾನೂನು ಹೋರಾಟ!
2002ರ ಜನವರಿ 14ರಂದು ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವೇತನ ನಿಗದಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಅಂದಿನ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು,ಸಿಬ್ಬಂದಿ ವೇತನ ನೀಡುವ ಮಾದರಿಯಲ್ಲಿ ಹೈಕೋರ್ಟ್ ಸಿಬ್ಬಂದಿಗೆ ವೇತನ ನಿಗದಿ ಮಾಡುವಂತೆ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಆದರೆ ಈ ವರದಿಯನ್ನು ಪಾಲಿಸದ ರಾಜ್ಯಸರ್ಕಾರ ಐದನೇ ವೇತನಾ ಆಯೋಗದ ಪರಿಶೀಲನೆಗೆ ಕಳುಹಿಸಿಕೊಟ್ಟಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಮುಖ್ಯನ್ಯಾಯಮೂರ್ತಿಗಳು ನೀಡಿದ್ದ ವರದಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲು 2011ರಲ್ಲಿ ರಾಜ್ಯಸರ್ಕಾರಕ್ಕೆ ಆದೇಶ ನೀಡಿದ್ದರು.
ಈ ಆದೇಶ ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು 2015ರಲ್ಲಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್, ಕರ್ನಾಟಕ ವಿಭಾಗೀಯ ಪೀಠ 2011 ಅಗಸ್ಟ್ 12ರಂದು ನೀಡಿದ್ದ ಆದೇಶ ಪಾಲಿಸುವಂತೆ ಸೂಚಿಸಿತ್ತು. ಆದರೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಪಾಲಿಸದ ರಾಜ್ಯಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿದೆ.