Advertisement

ವಾರ್ಷಿಕ 30ಕೋಟಿ ವೆಚ್ಚವಾದ್ರೂ ತಪ್ಪಲಿಲ್ಲ 199ನೇ ಸ್ಥಾನ..

03:24 PM May 15, 2017 | Team Udayavani |

ಹುಬ್ಬಳ್ಳಿ: ಸ್ವತ್ಛತೆಗೆ ವಾರ್ಷಿಕ ಅಂದಾಜು 30 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಆದರೂ ಅವಳಿನಗರ ಸ್ವತ್ಛತೆಯಲ್ಲಿ 199ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಗೌನು ಧರಿಸುವ ಪ್ರತಿ ಮಹಾಪೌರರು, ಅಧಿಕಾರ ಸ್ವೀಕರಿಸುವ ಆಯುಕ್ತರು ಮಹಾನಗರಸ್ವತ್ಛತೆಯೇ ನಮ್ಮ ಧ್ಯೇಯ ಎನ್ನುತ್ತಾರೆ. 

Advertisement

ಇವರ ಪ್ರತಿಜ್ಞೆ ಹಾಗೂ ಕೋಟಿ ಕೋಟಿ ಹಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ನಾಗರಿಕರಿಗೆ ಎದುರಾಗಿದೆ. ಸ್ವತ್ಛ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದಕ್ಕೆ ಪೂರಕವಾಗಿ ಸ್ವತ್ಛ ಭಾರತ ಅಭಿಯಾನದಡಿ ಸ್ವತ್ಛ ಭಾರತ ಮಿಶನ್‌ ದೇಶದ ಪ್ರಮುಖ ನಗರಗಳನ್ನು ತ್ಯಾಜ್ಯ ಮುಕ್ತವಾಗಿಸಲು ಹಲವು ಯೋಜನೆಗಳನ್ನು ರೂಪಿಸಿದೆ.

ಸ್ಪರ್ಧಾತ್ಮಕ ಮನೋಭಾವಕ್ಕೆ ಸ್ವತ್ಛತೆಯ ಸಮೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡುತ್ತಿದೆ. ಸ್ವತ್ಛತೆ ದೃಷ್ಟಿಯಿಂದ ಅವಳಿನಗರ ಪ್ರಧಾನಿ ಆಶಯಕ್ಕೆ ಮುನ್ನಡೆ ಬದಲು ಹಿಮ್ಮುಖ ನಡೆ ಕೈಗೊಂಡಿದೆ. ಕಳೆದ ಬಾರಿ ಸೀಮಿತ 70 ಮಹಾನಗರಗಳ ಸಮೀಕ್ಷೆಯಲ್ಲಿ ಹುಬ್ಬಳ್ಳಿ-ಧಾರವಾಡ 54ನೇ ಸ್ಥಾನ ಪಡೆದಿತ್ತು.

ಸ್ವತ್ಛತೆ ದೃಷ್ಟಿಯಿಂದ ಸುಧಾರಣೆ ಕಂಡುಕೊಂಡು ಮುಂದಿನ ಬಾರಿ ಪಟ್ಟಿಯಲ್ಲಿ ಮೇಲೇರುತ್ತೇವೆ ಎಂದು ಹೇಳಲಾಗಿತ್ತು. ಈ ಬಾರಿಯ ಸುಮಾರು  500 ನಗರಗಳಲ್ಲಿ ಮಹಾನಗರದ ಸ್ಥಾನ 199 ಆಗಿದೆ. ಕಂಡ ಕಂಡಲ್ಲಿ ಕಸ-ಬೆಂಕಿ; ಹುಧಾದಲ್ಲಿ ದಿನಕ್ಕೆ ಸುಮಾರು 400 ಟನ್‌ನಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದೆ.

ಇದರ ವಿಲೇವಾರಿ ಎಷ್ಟೆಂದು ನೋಡಲು ಹೋದರೆ ಶೂನ್ಯ ಸಾಧನೆ ಉತ್ತರ ಎದುರಾಗುತ್ತದೆ. ಅನೇಕ ಬಡಾವಣೆಗಳಲ್ಲಿ ತ್ಯಾಜ್ಯ ಬಿದ್ದಿರುತ್ತದೆ. ಪಾಲಿಕೆಯಿಂದ ನಿಯೋಜನೆಗೊಂಡ ಕಾರ್ಮಿಕರೇ ಅಲ್ಲಲ್ಲಿ ಒಣ ಕಸಕ್ಕೆ ಬೆಂಕಿ ಹಚ್ಚುವ ಮೂಲಕ ಪರಿಸರ ಹಾನಿಗೆ ಕೊಡುಗೆ ನೀಡತೊಡಗಿದ್ದಾರೆ. 

Advertisement

ಅವಳಿನಗರದಲ್ಲಿ ಸ್ವತ್ಛತೆಗೆಂದು ಪಾಲಿಕೆ ಕಾಯಂ ಪೌರ ಕಾರ್ಮಿಕರ ಕೊರತೆ ಕಾರಣಕ್ಕೆ ಸ್ವತ್ಛತೆಗೆ ಹೊರಗುತ್ತಿಗೆ ನೀಡಿದ್ದು, ವಾರ್ಷಿಕ ಅಂದಾಜು 30ಕೋಟಿ ರೂ. ವ್ಯಯಿಸಲಾಗುತ್ತಿದೆ. ಇಷ್ಟಾದರೂ ಕೊಳಚೆ ನಗರಗಳಲ್ಲಿ ಸಾಲಿನಲ್ಲಿ ಮಹಾನಗರ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ. 

ಮನೆ, ಮನೆಗೆ ತ್ಯಾಜ್ಯ ಸಂಗ್ರಹಿಸುತ್ತೇವೆ, ತ್ಯಾಜ್ಯ ನಿರ್ವಹಣೆಗೆ ಘಟಕ ಸ್ಥಾಪಿಸುತ್ತೇವೆ, ತ್ಯಾಜ್ಯ ವಿಂಗಡಣೆ ಮಾಡಿಸುತ್ತೇವೆ, ಶೂನ್ಯ ತ್ಯಾಜ್ಯ, ಅಲ್ಲಲ್ಲಿ ತ್ಯಾಜ್ಯ ವಿಲೇವಾರಿ ಸಣ್ಣ ಘಟಕಗಳ ಆರಂಭ, ಕಸ ವಿಂಗಡಣೆಗೆ ಬಕೇಟ್‌ಗಳ ವಿತರಣೆ, ವಿದೇಶ ಪದ್ಧತಿಯ ಪ್ರಯೋಗ ಒಂದೇ ಎರಡೇ ಹತ್ತಾರು ಹೇಳಿಕೆ, ಪ್ರಯೋಗಗಳು ಪುಂಖಾನುಪುಂಖವಾಗಿ ಬಂದವಾದರೂ ಪ್ರಯೋಜನ ಆಗಿಲ್ಲ ಎಂಬುದಕ್ಕೆ ಹುಧಾ ಸ್ಥಿತಿ ಸಾಕ್ಷಿಯಾಗಿದೆ. 

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ನಿಟ್ಟಿನಲ್ಲಿ ಪುಣೆಯಲ್ಲಿನ ಕಾರ್ಯ ನೋಡಿ ಬಂದಾಯಿತು. ತ್ಯಾಜ್ಯ ವಿಲೇವಾರಿಗೆ ಜಾಗತಿಕ ಟೆಂಡರ್‌, ಮಾದರಿ ಘಟಕ ಎಂದೆಲ್ಲ ಹೇಳಿ ಎಂಟು ವರ್ಷ ಕಳೆದವು. ಸೂರತ್‌, ಅಹ್ಮದಾಬಾದ್‌, ಸೂರ್ಯಪೇಟೆದಂತಹ ನಗರಗಳಿಗೆ ಭೇಟಿ ನೀಡಿ ಬಂದಿದ್ದೇವೆ, ಅಲ್ಲಿನ ಮಾದರಿ ಅಳವಡಿಸುತ್ತೇವೆ ಎಂಬುದು ಮಾತಿಗೆ ಸೀಮಿತವಾಗಿದೆ. 

ಕಣ್ಮು ಮುಚ್ಚಿದ ಪರಿಸರ ವಿಭಾಗ: ಪಾಲಿಕೆಯಲ್ಲಿ ಪರಿಸರ ವಿಭಾಗ ಹಾಗು ಅದರ ಅಧಿಕಾರಿಗಳು ಅವಳಿನಗರದ ಸ್ವತ್ಛತೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕಚೇರಿಯಲ್ಲೇ ಕಣ್ಮುಚ್ಚಿಕೊಂಡು ಕುಳಿತಿದ್ದಾರೆಯೇ? ಹಲವರಿಗೆ ಇಂತಹ ಅನುಮಾನ ಕಾಡುವಂತಾಗಿದೆ.

ಪರಿಸರ ವಿಭಾಗ ಇಂಜನಿಯರ್‌ಗಳು, ಆರೋಗ್ಯ ನಿರೀಕ್ಷರು ವಾರ್ಡ್‌ಗಳಿಗೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹ, ಸಾಗಣೆ ಬಗ್ಗೆ ಪರಿಶೀಲಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳು ಆಗುತ್ತಿಲ್ಲ. ಹೊಸದಾಗಿ ಬಂದಾಗ ಆಯುಕ್ತರು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಚುರುಕು ಮುಟ್ಟಿಸುವ ಭರವಸೆ ಮೂಡಿಸಿದ್ದರಾದರೂ,

ಇತ್ತೀಚೆಗೆ ಅವರೂ ಸಹ ವಾರ್ಡ್‌ಗಳನ್ನು ಮರೆತಂತೆ ಗೋಚರಿಸುತ್ತಿದೆ ಎಂಬುದು ಕೆಲವರ ಅನಿಸಿಕೆ. ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಗೊಂಡ ಹೆಮ್ಮೆಯ ನಡುವೆಯೇ ಸ್ವತ್ಛತೆ ನಗರಗಳಲ್ಲಿ 199ನೇ ಸ್ಥಾನ ದಕ್ಕಿರುವುದು ಕಪ್ಪು ಚುಕ್ಕೆಯಂತಾಗಿದೆ. 

ಮುಖ್ಯವಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಮುಖ್ಯಸ್ಥರು ಕರ್ತವ್ಯ ನಿರ್ವಹಣೆಯಲ್ಲಿ ವಿಫ‌ಲವಾಗಿರುವುದು ಎದ್ದು ಕಾಣುತ್ತಿದೆ. ಇನ್ನಾದರೂ ಪಾಲಿಕೆ ಸುಧಾರಣೆಗೆ ಮುಂದಾಗಿ ಮುಂದಿನ ಬಾರಿಯಾದರೂ ಸ್ವತ್ಛತೆ ಪಟ್ಟಿಯಲ್ಲಿ 100ರೊಳಗಿನ ಸ್ಥಾನಕ್ಕೇರುವುದಕ್ಕೆ ಇಚ್ಛಾಶಕ್ತಿ ಪ್ರದರ್ಶಿಸುವುದೇ ಕಾದು ನೋಡಬೇಕು.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next