Advertisement

ಜಾತ್ರೆಯಲ್ಲಿ ಪ್ರಾಣಿ ಬಲಿ ಬೇಡ

02:09 PM Mar 15, 2022 | Team Udayavani |

ಹರಿಹರ: ಗ್ರಾಮದೇವತೆ ಹಬ್ಬ ಮಾ. 22ರಿಂದ 26ರವರೆಗೆ ನಡೆಯಲಿದೆ. ದಲಿತರಿಗೆ, ಹಿಂದುಳಿದವರಿಗೆ, ಬಡವರಿಗೆ
ಆರ್ಥಿಕ ಹೊರೆಯಾಗದಂತೆ ಹಾಗೂ ಮೌಡ್ಯತೆಯನ್ನು ಹೊರತುಪಡಿಸಿ ಆಚರಿಸಲ್ಪಡಬೇಕು ಎಂದು ತಾಲೂಕು
ದಸಂಸ ಸಂಚಾಲಕ ಪಿ.ಜೆ. ಮಹಾಂತೇಶ್‌ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

Advertisement

ಹೆಣ್ಣು ದೇವತೆಗಳಿಗೆ ಪ್ರಾಣಿ ಬಲಿ ನೀಡಬೇಕಾಗುತ್ತದೆ ಎಂಬ ಮೌಡ್ಯತೆಯನ್ನು ಸಮಾಜದಲ್ಲಿ  ಬೆಳೆಸಲಾಗಿದೆ. ವಾಸ್ತವವಾಗಿ ಯಾವುದೆ ದೇವ, ದೇವತೆ ಪ್ರಾಣಿ ಬಲಿಯನ್ನು ಬೇಡುವುದಿಲ್ಲ.ನಮ್ಮಲ್ಲಿರುವ ದುಷ್ಟತನವನ್ನು ಬಲಿ ನೀಡಬೇಕು. ಉತ್ಸವದಲ್ಲಿ ಮಹಿಳೆಯರು, ಮಕ್ಕಳು ಅರೆಬೆತ್ತಲೆಯಾಗಿ ಬೇವಿನ ಉಡುಗೆ ತೊಡುವುದು ಮೌಡ್ಯತೆಯ ಪ್ರತೀಕ. ಅಧಿಕಾರಿಗಳು ಭಕ್ತಾದಿಗಳ ಮನವೊಲಿಸಿ ಮೌಡ್ಯತೆ ತಡೆಯಬೇಕು. ದಲಿತರು, ಹಿಂದುಳಿದವರು ಲಕ್ಷಾಂತರ
ರೂ. ಸಾಲ ಪಡೆದು ಕುರಿ ಬಲಿ ನೀಡುತ್ತಾರೆ. ಈ ಸಾಲ ಹಾಗೂ ಬಡ್ಡಿಯನ್ನು ತೀರಿಸಲು ಕುಟುಂಬದ ಸದಸ್ಯರು
ವರ್ಷ ತುಂಬ ದುಡಿದು ತೀರಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ. ಮನೆಯಲ್ಲಿ ಮಗ ಅಥವಾ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸದ ಜನರು ಇಂತಹ ಉತ್ಸವಕ್ಕೆ ಲಕ್ಷಾಂತರ ರೂ. ಸುರಿಯುವುದು ವ್ಯರ್ಥವಾಗಿದೆ. ಈ
ಕುರಿತು ಆಯಾ ಸಮಾಜಗಳ ಪ್ರಜ್ಞಾವಂತರು, ಉತ್ಸವ ಸಮಿತಿಯವರು, ಜಿಲ್ಲಾ, ತಾಲೂಕು ಆಡಳಿತದವರು
ಜನತೆಯಲ್ಲಿ ವ್ಯಾಪಕ ಜಾಗೃತಿಯನ್ನು ಮೂಡಿಸಬೇಕು.

ಶೋಷಿತರು ಸದಾ ಆರ್ಥಿಕ ಹೊರೆ, ಮೌಡ್ಯತೆ, ಮೂಢನಂಬಿಕೆಗಳ ಚಕ್ರವ್ಯೂಹದಲ್ಲಿ ಸಿಲುಕಿರಬೇಕೆಂಬ ಕೆಲವರ ಶಡ್ಯಂತ್ರವೂ ಇಂತಹ ಆಚರಣೆಗಳಲ್ಲಿ ಅಡಗಿದೆ ಎಂಬುದನ್ನು ಜನತೆ ಅರಿಯಬೇಕಿದೆ. ಕಳೆದೆರಡು ವರ್ಷ ಕೋವಿಡ್‌ ಲಾಕ್‌ಡೌನ್‌ ಆಗಿ ಜನರು ಸಂಕಷ್ಟದಲ್ಲಿದ್ದಾರೆ.  ಒಟ್ಟಾರೆ ಈ ಹಬ್ಬ ಭಕ್ತಿಪೂರ್ವಕವಾಗಿ, ಸರಳವಾಗಿ, ಆರ್ಥಿಕವಾಗಿ ಹೊರೆಯಾಗದಂತೆ ಮೌಡ್ಯರಹಿತವಾಗಿರಲಿ. ಜಿಲ್ಲಾಧಿಕಾರಿಯವರು ಈಗಾಗಲೇ ಕೋಣ ಬಲಿ ನೀಡಬಾರದೆಂದು ಆದೇಶಿಸಿದ್ದಾರೆ. ಕೋಣದ ದೇಹದಿಂದ ಸಿರೀಂಜ್‌ ಮೂಲಕ ರಕ್ತ ತೆಗೆದು ಬಲಿ ನೀಡುವ ಪ್ರಕ್ರಿಯೆ ನಡೆಸುವಂತಾಗಲಿ ಎಂದು ಅವರು ಕೋರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next