ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಮಾನವ ನಿರ್ಮಿತ ದ್ವೀಪಸದೃಶ ಕರೂರು ಹೋಬಳಿಯ ಆರೋಗ್ಯ ಕೇಂದ್ರಗಳಲ್ಲಿ ಅಂಬುಲೆನ್ಸ್ ಸೇವೆಗಳು ವಾಹನದ ಕೊರತೆಯಿಂದ ಸ್ಥಗಿತಗೊಂಡಿದ್ದು, ಹೆರಿಗೆ, ಅಪಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ತೆರಳಬೇಕಾದ ನಾಗರಿಕರು ಅಂಬುಲೆನ್ಸ್‌ನೊಳಗಿನ ತಕ್ಷಣದ ವೈದ್ಯ ಸೇವೆಗಳ ಕೊರತೆಯಿಂದ ಸಾವಿನ ಆತಂಕದ ಜೊತೆ ಪಯಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಅಂಬುಲೆನ್ಸ್ ಕೊರತೆ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯೋರ್ವರು ಖಾಸಗಿ ವಾಹನದಲ್ಲಿ ಸಾಗರ ನಗರದ ಉಪವಿಭಾಗೀಯ ಆಸ್ಪತ್ರೆಗೆ ತೆರಳುವಂತಾಗಿರವುದು ಕರೂರು ಭಾಗದ ಜನರನ್ನು ಆಕ್ರೋಶಕ್ಕೆ ಈಡುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರೂರು ಹೋಬಳಿಯ ಬ್ಯಾಕೋಡು ಹಾಗೂ ತುಮರಿ ಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ಅಂಬುಲೆನ್ಸ್ ವಾಹನದ ಕೊರತೆ ಇದೆ. ಈ ಮೊದಲು ಇದ್ದ ಟಿಟಿಯನ್ನು ದುರಸ್ತಿಗೆ ಎಂದು ಇಲ್ಲಿಂದ ಸ್ಥಳಾಂತರಿಸಲಾಗಿದ್ದು, ಈವರೆಗೆ ಬದಲಿ ವ್ಯವಸ್ಥೆ ಮಾಡಲಾಗಿಲ್ಲ ಎಂದು ಕರೂರು ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮರಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಪ್ರತಿಕ್ರಿಯಿಸಿ, ೧೦೮ ತುರ್ತು ವಾಹನದ ಅನಾರೋಗ್ಯದ ಕಥೆ ಕೇಳಿದರೆ ಬೇಸರವಾಗುತ್ತದೆ. ಈ ಭಾಗದ ಜನ ಪ್ರತಿಯೊಂದನ್ನು ಕೂಡ ಹೋರಾಟ ಮಾಡಿಯೇ ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಹಿಂದೆ ಕೂಡ ಈ ಭಾಗಕ್ಕೆ ಹೋರಾಟ ಮಾಡಿದ್ದರಿಂದ ಅಂಬುಲೆನ್ಸ್ ಸೇವೆ ಸಿಕ್ಕಿತ್ತು. ಇಲ್ಲಿನ ಭೌಗೋಳಿಕ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಯೇ ಅಂಬುಲೆನ್ಸ್‌ನ ದುರಸ್ತಿಗೆ ಮುಂದಾಗಬೇಕಿತ್ತು. ಜನಪ್ರತಿನಿಧಿಗಳು ಬದಲಾಗುತ್ತಲೇ ಇದ್ದರೂ ಇಲ್ಲಿನ ಸಂಕಷ್ಟ ಅದೇ ರೀತಿ ಇದೆ. ದ್ವೀಪದ ಲಾಂಚ್, ಆರೋಗ್ಯ, ವಿದ್ಯುತ್, ಕಂದಾಯ ಇಲಾಖೆಗಳ ಸೇವೆಗಳನ್ನು ಪಡೆಯುವುದರಲ್ಲಿ ಇಲ್ಲಿನ ಜನರ ಹಣೆಬರಹ ಬದಲಾಗುತ್ತಿಲ್ಲ. ತಕ್ಷಣ ಪರ್ಯಾಯ ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Security Breach: ನಿರುದ್ಯೋಗ, ಹಣದುಬ್ಬರವೇ ಸಂಸತ್ ನ ಭದ್ರತಾ ಲೋಪಕ್ಕೆ ಕಾರಣ: ರಾಹುಲ್ ಆರೋಪ