ಬಳ್ಳಾರಿ: ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಅಖಿಲ ಭಾರತ ಕಿಸಾನ್ ಸಮನ್ವಯ ಸಂಘರ್ಷ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಗೆ ಗಣಿನಾಡು ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಎಡಪಂಥೀಯ ಸಂಘಟನೆಗಳು ಸಹ 8 ಗಂಟೆಯಾದರೂ ಯಾವೊಂದು ಸಂಘಟನೆಗಳು ಸಹ ಪ್ರತಿಭಟಿಸಲು ಬಂದಿಲ್ಲ. ನಗರದಲ್ಲಿ ಎಂದಿನಂತೆ ಸಾರಿಗೆ, ಖಾಸಗಿ ಬಸ್, ನಗರ ಸಾರಿಗೆ, ಆಟೋ ಇನ್ನಿತರೆ ಪ್ರಯಾಣಿಕ ವಾಹನಗಳ ಸಂಚಾರ ಎಂದಿನಂತಿದೆ. ಹೊಟೇಲ್, ಬೀದಿ, ರಸ್ತೆ ಬದಿ ಬೀಡಿ ಅಂಗಡಿಗಳು, ಟೀ ಅಂಗಡಿಗಳು, ಪೆಟ್ರೋಲ್ ಬಂಕ್ ಗಳು, ತರಕಾರಿ ಮಾರುಕಟ್ಟೆ ಎಂದಿನಂತೆ ವ್ಯವಹಾರ ನಡೆಸುತ್ತಿದೆ.
ಬಂದ್ ಗೆ ಬಾರದ ರೈತರು
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 15-20 ದಿನಗಳಲ್ಲಿ ಎರಡ್ಮೂರು ಬಂದ್, ಪ್ರತಿಭಟನೆಗಳು ನಡೆದಿವೆ. ಕಳೆದ ನ.26 ರಂದು ಅಖಿಲ ಭಾರತ ಮುಷ್ಕರದ ಜತೆಯಲ್ಲೇ ಬಳ್ಳಾರಿ ವಿಭಜನೆ ಖಂಡಿಸಿ ಬಳ್ಳಾರಿ ಬಂದ್ ಮಾಡಲಾಗಿತ್ತು. ನಂತರ ಕಂಪ್ಲಿ ತಾಲೂಕನ್ನು ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಒತ್ತಾಯಿಸಿ ಕಂಪ್ಲಿ ಬಂದ್ ಮಾಡಲಾಗಿತ್ತು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಆಚರಿಸಲಾಗಿತ್ತು. ಜತೆಗೆ ಬಳ್ಳಾರಿ ವಿಭಜನೆ ಖಂಡಿಸಿಯೂ ಆಗಾಗ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಪ್ರತಿಭಟನೆ, ಬಂದ್ ಗೆ ಜನರನ್ನು, ರೈತರನ್ನು ಕರೆತರುವುದೇ ಮುಖಂಡರಿಗೆ ಕಷ್ಟವಾಗುತ್ತಿದೆ. ರೈತರನ್ನು ಬಂದ್ ಕರೆದರೆ, ಭತ್ತ ಕಟಾವು ಮಾಡಬೇಕು. ಮೆಣಸಿನಕಾಯಿ ಅರಿಯಬೇಕು ಎನ್ನುತ್ತಿದ್ದಾರೆ. ಹೀಗಾಗಿ ಭಾರತ್ ಬಂದ್ ನ್ನು ಸಾಧ್ಯವಾದಷ್ಟು ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ರೈತ ಮುಖಂಡರು ಹೇಳುತ್ತಾರೆ.
ಪೊಲೀಸ್ ಬಂದೋ ಬಸ್ತ್
ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಸೂಕ್ತ ಬಂದೋ ಬಸ್ತ್ ಏರ್ಪಡಿಸಲಾಗಿದೆ.