Advertisement

ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಲು ಅವಕಾಶವಿಲ್ಲ: ಗೋವಿಂದ ಕಾರಜೋಳ

03:03 PM Sep 15, 2022 | Team Udayavani |

ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ ನೀಡಲು ಬರುವುದಿಲ್ಲ. ಪರಿಹಾರ ನೀಡಲು ಕಾನೂನಾತ್ಮಕವಾಗಿ ಯಾವುದೇ ಅವಕಾಶ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Advertisement

ವಿಧಾನ ಪರಿಷತ್‌ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಅರವಿಂದ್‌ ಕುಮಾರ್‌ ಅವರು ಕೇಳಿದ ಕಾರಂಜಾ ಮುಳುಗಡೆ ಪರಿಹಾರಕ್ಕೆ ಒತ್ತಾಯಿಸಿ ರೈತರು 80 ದಿನಗಳಿಂದ ಧರಣಿ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 69 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ. ಇನ್ನೂ ಕೆಲವು ರೈತರು ಕೋರ್ಟ್‌ಗೆ ಹೋಗಿಲ್ಲ. ಕೋರ್ಟ್‌ಗೆ ಹೋಗದೆ ಇರುವ ರೈತರು ಸರ್ಕಾರಕ್ಕೆ ಅರ್ಜಿ ಹಾಕಿದವರಿಗೂ ಕೂಡ ಪರಿಹಾರ ಕೊಡಲು ಅವಕಾಶ ಇದೆ. ಆದರೆ, ಅವರು ಮೂರು ತಿಂಗಳ ಒಳಗೆ ಅರ್ಜಿ ಹಾಕಿಕೊಂಡಿಲ್ಲ. ಈಗ 25-30 ವರ್ಷದ ನಂತರ ಧರಣಿ ಕೂತರೆ ಕೊಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

25 ಜೂನ್ 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಅರವಿಂದ್ ಕುಮಾರ್‌ ಅವರ ಪಕ್ಷದ ಸರ್ಕಾರವೇ ಇತ್ತು. ಪರಿಹಾರ ಕೊಡಲು ಅವಕಾಶ ಇಲ್ಲ ಎಂಬುದಾಗಿ ಸಂಪುಟದಲ್ಲಿ ನಿರ್ಣಯವಾಗಿದೆ. ಯುಕೆಪಿ ಮಾದರಿಯಲ್ಲಿ ಕೊಡಬೇಕೆಂದು ಇವರ ಹೋರಾಟ ಇದೆ. ಯುಕೆಪಿ ಮಾದರಿಯಲ್ಲಿ ಪರಿಹಾರ ಕೊಡುವುದಕ್ಕೆ ಅವಕಾಶ ಇಲ್ಲ. ಯುಕೆಪಿ ಯೋಜನೆಗೆ ವಿಶ್ವಬ್ಯಾಂಕ್ ನೆರವು ತೆಗೆದುಕೊಂಡಿದ್ದೇವೆ. ವಿಶ್ವ ಬ್ಯಾಂಕ್‌ ನವರ ಕಂಡಿಷನ್ ಇದೆ. ಯಾವ ರೀತಿ ಪರಿಹಾರ ಕೊಡಬೇಕೆಂಬ ಕಂಡಿಷನ್ ಇದೆ. ಆ ಕಂಡಿಷನ್ ಒಪ್ಪಿಕೊಂಡ ನಂತರ ಅವರು ಸರ್ಕಾರಕ್ಕೆ ಸಾಲ ಕೊಟ್ಟಿದ್ದಾರೆ.  ಅದಕ್ಕಾಗಿ ಅದಕ್ಕೂ ಇದಕ್ಕೆ ಹೋಲಿಸಲು ಬರುವುದಿಲ್ಲ ಎಂದರು.

ರೈತರು ಧರಣಿ ಮಾಡ್ತಾ ಇರುವುದಕ್ಕೆ ಕೊಡಲು ಸಾಧ್ಯವಿಲ್ಲ. 30-40. ವರ್ಷ ಆಗಿದೆ ಈ ಪ್ರಾಜೆಕ್ಟ್ ಶುರು ಮಾಡಿ. 69 ಕೋಟಿ ಪರಿಹಾರ ತೆಗೆದುಕೊಂಡಿದ್ದಾರೆ. ಇನ್ನು ಒಂದು ರೂಪಾಯಿ ಕೊಡಲ ಸಾಧ್ಯವಿಲ್ಲ. ಯಾವುದೇ ಬೇಡಿಕೆ ಪರಿಗಣಿಸಲು ಸಾಧ್ಯವಿಲ್ಲ. ಹೈಕೋರ್ಟ್ ಸಹ ಇದನ್ನು ರಿಜೆಕ್ಟ್ ಮಾಡಿದೆ. ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೋಗಬೇಕಷ್ಟೇ. ಇಂತಹ ಬೇಡಿಕೆಗಳನ್ನು ತರುವಾಗ ಸಂಪೂರ್ಣ ತಿಳಿದು ಮೇಲ್ಮನೆ ತರುವಂತೆ ಸಚಿವರು ಸೂಚಿಸಿದರು.

ಬಳ್ಳಾರಿ ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಬಗ್ಗೆ ವೈಎಂ ಸತೀಶ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಕುಡಿಯುವ ನೀರಿನ ಯೋಜನೆ ಕೇಳಿದ್ದಾರೆ. ಜಲಸಂಪನ್ಮೂಲ ಇಲಾಖೆ ಇರುವುದು ನೀರಾವರಿ ಸೌಲಭ್ಯ ಒದಗಿಸಲು ಎಂಬುದು ಗಮನದಲ್ಲಿರಲಿ. ಯೋಜನಾ ವೆಚ್ಚ 60 ಕೋಟಿ ರೂ. ಇತ್ತು, ಅನುಮೋದನೆ ಆಗಿತ್ತೆಂದು ಹೇಳುತ್ತಾರೆ. ಆದರೆ, ಯೋಜನೆ ಅನುಮೋದನೆಯೇ ಆಗಿಲ್ಲ ಎಂದರು.

Advertisement

ಇದನ್ನೂ ಓದಿ:ಕಳಪೆ ರಸ್ತೆ ಬಗ್ಗೆ ಕ್ಯಾಮರಾ ಮುಂದೆ ವಿವರಿಸುವಾಗಲೇ ಆಟೋ ಪಲ್ಟಿ!: ವಿಡಿಯೋ ವೈರಲ್‌

ಈ ಯೋಜನೆ 2019-2020 ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಯ್ತು. ಯೋಜನೆಗಳು 2013ರಿಂದ ಇವತ್ತಿನವರೆಗೂ ಘೋಷಣೆ ಆಗುತ್ತನೇ ಇದೆ. ನಮ್ಮ ಬಜೆಟ್ ಗೂ ನಾವು ಮಂಜೂರು ಮಾಡುವ ಕಾಮಗಾರಿಗೂ ಎಲ್ಲಿಯೂ ಸಂಬಂಧ ಇಲ್ಲ. ಇವತ್ತಿನ ಕಾರ್ಯಭಾರ 1 ಲಕ್ಷ 2 ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ನಮಗೆ ಬಜೆಟ್‌ ನಲ್ಲಿ ಸಿಗ್ತಾ ಇರುವುದು 18, 19 ಸಾವಿರ ಕೋಟಿ ಮಾತ್ರ. ಹೀಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಹೇಳಿದೆ. ಹಣ ಇದ್ದರೆ ನಾಳೆನೇ ಮಾಡಿಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next