ಸಿಂಧನೂರು: ಯತ್ನಾಳ್ ಮತ್ತು ಈಶ್ವರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?. ಆ ಇಬ್ಬರಿಗೂ ಆರೆಸ್ಸೆಸ್ ಹಾಗೂ ಸಂತೋಷ ಕುಮ್ಮಕ್ಕಿದೆ. ಬಿಎಸ್‌ವೈ ಕೆಳಗಿಳಿಸಲು ಅವರದೇ ಪಕ್ಷದಲ್ಲಿ ಷಡ್ಯಂತ್ರ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಪಗಡದಿನ್ನಿ ಗ್ರಾಮದ ಕಾಂಗ್ರೆಸ್ ಮುಖಂಡ ಚಿಟ್ಟೂರಿ ಶ್ರೀನಿವಾಸ್ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿಂದ ಅಲ್ಲ; ಕಳೆದ ಮೂರ್‍ನಾಲ್ಕು ತಿಂಗಳಿಂದ ಸರ್ಕಾರದ ಮೇಲೆ ಯತ್ನಾಳ್ ಅಟ್ಯಾಕ್ ಮಾಡುತ್ತಿದ್ದಾರೆ. ಏಕೆ ಕ್ರಮ ಕೈಗೊಂಡಿಲ್ಲ. ಒಬ್ಬ ಮಂತ್ರಿಯಾಗಿ ಈಶ್ವರಪ್ಪ ತಮ್ಮದೇ ಸಿಎಂ ವಿರುದ್ಧ ರಾಜ್ಯಪಾಲರು, ಹೈಕಮಾಂಡ್ ಗೆ ದೂರು ನೀಡುತ್ತಾರೆ. ಹಾಗಾದ್ರೆ, ಆ ಪಕ್ಷದಲ್ಲಿ ಎಲ್ಲ ಸರಿ ಇಲ್ಲ ಎಂದು ಭಾವಿಸಬೇಕಾ? ಎಂದು ಪ್ರಶ್ನಿಸಿದರು.
ಯಾರ್ರೀ ರೇಣುಕಾಚಾರ್ಯ?: ನಮ್ಮ ಕಾಲದಲ್ಲೇ ಅನ್ನಭಾಗ್ಯ ಫೈಲ್ ಸಿದ್ಧವಾಗಿತ್ತು ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಕೇಳಿದಾಗ, ಯಾರ್ರೀ ಆ ರೇಣುಕಾಚಾರ್ಯ. ಹೇಳ್ಳೋಕು ಒಂದು ಬದ್ಧತೆ ಬೇಡ್ವಾ? ಅವರಿಗೆ ಅಕ್ಕಿ ಕೊಡುವ ಉದ್ದೇಶ ಇದ್ದರೆ, 7 ಕೆ.ಜಿಯಿಂದ 5 ಕೆ.ಜಿಗೆ ಯಾಕೆ ಕಡಿತ ಮಾಡಿದರು.
ಅದೆಲ್ಲ ಸುಳ್ಳು ಹೇಳಿಕೆ ಬಿಡ್ರಿ.. ಎಂದರು. ಕಾಂಗ್ರೆಸ್‌ನಲ್ಲಿ ಬೆಂಕಿ ಬಿದ್ದಿದೆ, ನಮ್ಮಲ್ಲಿ ಹೊಗೆಯಾಡುತ್ತಿದೆ ಎಂಬ ಕಟೀಲ್ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅವರ ಪಕ್ಷದಲ್ಲಿ ಹೊಗೆಯಾಡುತ್ತಿದೆ ಎಂಬುದನ್ನಾದರೂ ಒಪ್ಪಿಕೊಂಡಿದ್ದಾರೆ ಅಲ್ವಾ? ನಮ್ಮಲ್ಲಿ ಯಾವ ಬೆಂಕಿನೂ ಇಲ್ಲ, ಹೊಗೆನೂ ಇಲ್ಲ ಎಂದು ಪ್ರತಿಕ್ರಿಯಿಸಿದರು.
5ಎ ಕೆನಾಲ್ ಬಗ್ಗೆ 4 ಗ್ರಾಪಂ ವ್ಯಾಪ್ತಿ ರೈತರ ಹೋರಾಟಕ್ಕೆ ಬೆಂಬಲ ಇದೆ. ಅವರ ಪರ ಅಸೆಂಬ್ಲಿಯಲ್ಲಿ ಒತ್ತಾಯಿಸಲಾಗುವುದು. ಈ ಸರ್ಕಾರ ಮಾಡುವ ವಿಶ್ವಾಸ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರುವಿಹಾಳ, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಚಿಟ್ಟೂರಿ ಶ್ರೀನಿವಾಸ್ ಇದ್ದರು.