ಚಿತ್ತಾಪುರ: ಪಟ್ಟಣದ ವಾರ್ಡ್ ಸಂಖ್ಯೆ 4ರಲ್ಲಿ ಬರುವ ವೆಂಕಟೇಶ್ವರ ಕಾಲೋನಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿರುವುದರಿಂದ ಬೆಳಗ್ಗೆ ಎದ್ದು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಳ ಬಂದಾಗ ಪ್ರತಿಯೊಬ್ಬರೂ ಮೋಟಾರ್ ಹಚ್ಚಿದ್ದರೂ ನಳದಲ್ಲಿ ನೀರು ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೋನಿ ನಿವಾಸಿಗಳು ಯಾವ ನಳದಲ್ಲಿ ನೀರು ಬರುತ್ತಿದೆ ಎಂದು ಹುಡುಕಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಬಹುತೇಕ ಮನೆಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರು ಕನಿಷ್ಠ ಒಂದು ಕಿ.ಮೀ. ದೂರವಾದರೂ ಕ್ರಮಿಸಿ, ಇರುವ ಒಂದೇ ಬೋರ್‌ವೆಲ್ ಬಳಿ ಸರದಿ ನಿಂತು ಕುಡಿಯುವ ನೀರು ತರಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ ಎಂದು ಗೃಹಿಣಿ ಅಕ್ಕನಾಗಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನೀರಿನ ಸಮಸ್ಯೆ ನಿವಾರಿಸುವತ್ತ ಪುರಸಭೆ ಯಾವುದೇ ಗಮನ ಹರಿಸಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿಲ್ಲ ಎಂದು ಕಾಲೋನಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಲೋನಿ ನಿವಾಸಿಗಳಿಗೆ ಸಮರ್ಪಕ ಕುಡಿಯಲು ಕನಿಷ್ಠ ಎರಡು ಕೊಡ ನೀರು ಸಿಗುತ್ತಿಲ್ಲ. ಕಾರಣ ದೂರದ ಬಾವಿಗಳಿಂದ 600 ರೂ.ಗಳಿಂದ 800 ರೂ. ನೀಡಿ ಟ್ಯಾಂಕರ್‌ಗಳಿಂದ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಲೋನಿ ನಿವಾಸಿಗಳು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದಲ್ಲಿಯೇ ವೆಂಕಟೇಶ್ವರ ಕಾಲೋನಿ ನಂ.1 ಪಟ್ಟ ಪಡೆದಿದೆ. ಆದ್ದರಿಂದಲೇ ಇಲ್ಲಿನ ನಿವಾಸಿಗಳಿಂದ ಎಲ್ಲದಕ್ಕೂ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ ಕಾಲೋನಿಯಲ್ಲಿ ಸ್ವಚ್ಛತೆ, ರಸ್ತೆ, ಚರಂಡಿ, ದೀಪಗಳು ಇಲ್ಲದೇ ಇರುವುದರಿಂದ ಹಾಳು ಕೊಂಪೆಯಂತೆ ಗೋಚರಿಸುತ್ತಿದೆ. ಕಾಲೋನಿಯಲ್ಲಿ ಸಾವಿರಾರು ಜನರು ಹಲವು ವರ್ಷಗಳಿಂದ ವಾಸವಾಗಿದ್ದಾರೆ. ಆದರೆ ಕಾಲೋನಿಗೆ ಕುಡಿಯಲು ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಕಾರಣ ಅಲೆದಾಡುವಂತಹ ಪರಿಸ್ಥಿತಿ ಉಲ್ಬಣಗೊಂಡಿದೆ.
Advertisement
ಪ್ರತಿದಿನ ನೀರು ಪೂರೈಕೆ ಆಗುತ್ತಿರುವುದು ಒಂದೆಡೆಯಾದರೆ, ಕಾಲೋನಿಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಮನೆಗೊಂದು ನಳ ಅಳವಡಿಸಿಕೊಂಡಿದ್ದಾರೆ. ಆದರೆ ಟಾಕಿ ಸಮೀಪವಿರುವ ಮನೆಗಳಿಗೆ ಮಾತ್ರ ನೀರು ಬರುತ್ತದೆ. ದೂರದ ಮನೆಗಳಲ್ಲಿ ಹನಿ ನೀರು ಬರುತ್ತಿಲ್ಲ.
Related Articles
Advertisement
ಪಟ್ಟಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೋಟಿಗಟ್ಟಲೇ ಅನುದಾನ ರೂಪದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡು ಪಟ್ಟಣದಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಿದರೂ ಚರಂಡಿ ನೀರು ಹಾಳಾದ ಪೈಪ್‌ಗ್ಳ ಮೂಲಕ ಹರಿದು ಕಲುಷಿತ ನೀರು ಪಟ್ಟಣದೆಲ್ಲೆಡೆ ಸರಬರಾಜು ಆಗುತ್ತಿದೆ ಎಂದು ವಾರ್ಡ್ ನಿವಾಸಿ ಮೈನೋದ್ದಿನ್ ಬಾಂಬೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪಟ್ಟಣದಲ್ಲಿಯೇ ವೆಂಕಟೇಶ್ವರ ಕಾಲೋನಿ ನಂ.1 ಪಟ್ಟ ಪಡೆದಿದೆ. ಆದರೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಆದರೆ ತೆರಿಗೆ ಮಾತ್ರ ಪ್ರತಿ ತಿಂಗಳು ಕಟ್ಟಬೇಕು. ಇಲ್ಲದಿದ್ದರೆ ನಳಗಳನ್ನು ಬಂದ್ ಮಾಡಲಾಗುವುದು ಎಂದು ಆಟೋದಲ್ಲಿ ಪ್ರಚಾರ ಮಾಡುತ್ತಾರೆ. ಅದೇ ರೀತಿ ಕಾಲೋನಿಯಲ್ಲಿ ಸಮರ್ಪಕ ನೀರು ಸೀಗುತ್ತಿದೆಯೋ, ಇಲ್ಲವೊ ಎನ್ನುವುದನ್ನು ನೋಡಲು ಬರೋದಿಲ್ಲ.
•ಕಲಾವತಿ, ವಾರ್ಡ್ ನಿವಾಸಿ
ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೆಳಗ್ಗೆ ಎದ್ದ ಕೂಡಲೇ ಪಾಳಿ ಹಚ್ಚಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
• ಮಲ್ಲಿಕಾರ್ಜುನ, ಕಾಲೋನಿ ನಿವಾಸಿ