ಸುರತ್ಕಲ್: ನವಮಂಗಳೂರು ಬಂದರಿನ ಟ್ರಸ್ಟಿಯಾಗಿ ಆಯ್ಕೆಯಾದ ಅಬೂಬಕರ್ ಕೃಷ್ಣಾಪುರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ವತಿಯಿಂದ ಶುಕ್ರವಾರ ಎನ್‌ಎಂಪಿಟಿ ಅತಿಥಿ ಗೃಹದಲ್ಲಿ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಅಬೂಬಕರ್ ಅವರು ಇಂಟಕ್ ಸಂಘಟನೆ ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ. ಅದಕ್ಕೆ ಇಂಟಕ್‌ನ ಮಾಜಿ ಅಧ್ಯಕ್ಷ ಎಂಎನ್ ಅಡ್ಯಂತಾಯ ಅವರ ಪ್ರೋತ್ಸಾಹ, ಬೆಂಬಲ ಇತ್ತು. ಅಬೂಬಕರ್ ನಿಷ್ಠೆ ಅವರನ್ನು ಈ ಸ್ಥಾನಕ್ಕೆ ತಂದಿದೆ. ಅದು ಇತರ ಸದಸ್ಯರಿಗೆ ಮಾದರಿಯಾಗಲಿ ಎಂದರು.
ಇಂಟಕ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ವೆಂಕಟೇಶ್ ಮಾತನಾಡಿ, ಬೆಂಗಳೂರಿನಲ್ಲಿ ಇಂಟಕ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಿಗೆ ಇಂಟಕ್ ಶಕ್ತಿ ಗೊತ್ತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಇಂಟಕ್‌ನ ಕಾರ್ಯ ಕರ್ತರಿಗೆ ಟಿಕೆಟ್ ಕೋರಲು ನಾವು ಹೋರಾಡಲಿದ್ದೇವೆ ಎಂದರು.
ಎಂಎನ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಬೂಬಕ್ಕರ್ ಯಾವತ್ತೂ ಅಧಿಕಾರದ ಹಿಂದೆ ಹೋದವರಲ್ಲ, ಅವರು ಸಂಘಟನೆಯಲ್ಲಿ ಕಾರ್ಮಿಕರಿಗೆ ಒಳ್ಳೆಯದಾಗಲು ಮಾತ್ರ ಶ್ರಮಿಸಿದವರು. ಈ ಬಾರಿ ನಾನು ಒತ್ತಾಯ ಮಾಡಿ ಅವರಿಗೆ ಟ್ರಸ್ಟಿಯಾಗಲು ಒಪ್ಪಿಸಿದೆ. ಜಾತ್ಯತೀತ ಮನೋಭಾವನೆ ನಮ್ಮಲ್ಲಿ ಮೂಡಿದಾಗ ಮಾತ್ರ ಇಂಟಕ್ ಸಂಘಟನೆ ಬೆಳೆಯುತ್ತದೆ ಎಂದರು.
ಇಂಟಕ್, ಕೆನರಾ ಪೋರ್ಟ್ ವರ್ಕರ್ ಯೂನಿಯನ್ ಮತ್ತಿತರ ಇಂಟಕ್‌ನ ಸಹ ಸಂಘಟನೆ ಮುಖಂಡರು ಅಬೂಬಕರ್ ಅವರನ್ನು ಗೌರವಿಸಿದರು.
ರಾಜ್ಯ ಇಂಟಕ್ ಮುಖಂಡರಾದ ಬಿ.ಕೆ. ಸುರೇಶ್, ಸಿ.ಎ. ರಹೀಂ, ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಮುಖಂಡರಾದ ಶಶಿರಾಜ್ ಅಂಬಟ್, ಡಿ.ಆರ್. ನಾರಾಯಣ್, ಶಿವಣ್ಣ, ರಾಕಿ ಪಿಂಟೋ, ಶಿಕ್ಷಣತಜ್ಞೆ ನಿಶಾ ಲಕ್ಷ್ಮಣ್ ಉಪಸ್ಥಿತ ರಿದ್ದರು. ಸುಕುಮಾರ್ ಸ್ವಾಗತಿಸಿದರು. ವಿಜಯ ಸುವರ್ಣ ವಂದಿಸಿದರು.