Advertisement
ವಿನ್ನಿಸ್ಟಿಯಾ ನಗರದಲ್ಲಿರುವ ವಿನ್ನಿಸ್ಟಿಯಾ ನ್ಯಾಶನಲ್ ಪಿರೊಗೊವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿರುವ ನಿಯಮ್ ರೊಮೆನಿಯಾದಿಂದ ಮುಂಬಯಿ ಮಾರ್ಗವಾಗಿ ಗುರುವಾರ ದಿಲ್ಲಿಗೆ ತಲುಪಿದ್ದಾರೆ. ನಿಯಮ್ ಅವರ ತಂದೆ ಬಿ.ವಿ. ರಾಘವೇಂದ್ರ ದಿಲ್ಲಿಯ ಕರ್ನಾಟಕ ಭವನದಲ್ಲಿ ವ್ಯವಸ್ಥಾಪಕರಾಗಿರುವುದರಿಂದ ಅಲ್ಲಿಯೇ ಕುಟುಂಬದವರೊಂದಿಗೆ ವಾಸವಿದ್ದಾರೆ.
Related Articles
Advertisement
ಉಡುಪಿಯ ವಿದ್ಯಾರ್ಥಿಗಳ ಮಾಹಿತಿ :
ಗ್ಲೇನ್‌ವಿಲ್ ಫೆರ್ನಾಡಿಂಸ್ ಸದ್ಯ ರಾಯಭಾರಿ ಕಚೇರಿ ನಿರ್ದೇಶನದಂತೆ ಖಾರ್ಕಿವ್ ಸಮೀಪದ ನಗರದಲ್ಲಿದ್ದಾರೆ. ಆ್ಯನಿಫ್ರೈಡ್ ರಿಡ್ಲಿ ಡಿ’ಸೋಜಾ ಸದ್ಯ ಖಾರ್ಕಿವ್ ರೈಲು ನಿಲ್ದಾಣದಿಂದ ಲೈವ್ ನಗರಕ್ಕೆ ಹೋಗಿದ್ದಾರೆ. ರೋಹನ್ ಧನಂಜಯ ಬಗ್ಲಿ ಅವರು ಪೋಲ್ಯಾಂಡ್‌ನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಂದಿನಿ ಅರುಣ್ ಅವರು ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನದ ಮೂಲಕ ದುಬಾೖ ಮಾರ್ಗವಾಗಿ ಮಸ್ಕತ್‌ಗೆ ಹೋಗಿದ್ದಾರೆ. ಮಸ್ಕತ್‌ನಲ್ಲಿ ಅವರ ತಂದೆಯ ಜತೆ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಾವುಂದದ ಅಂಕಿತಾ ಸ್ವದೇಶಕ್ಕೆ :
ಕುಂದಾಪುರ: ಉಕ್ರೇನ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮಸ್ಕಿಯ ಅಂಕಿತಾ ಜಗದೀಶ್ ಪೂಜಾರಿ (22) ಗುರುವಾರ ಬೆಳಗ್ಗೆ ಉಕ್ರೇನ್‌ನಿಂದ ಹೊಸದಿಲ್ಲಿಗೆ ಬಂದಿಳಿದಿದ್ದು, ಗುರುವಾರ ಸಂಜೆ ಮುಂಬಯಿಗೆ ಆಗಮಿಸಿದ್ದಾರೆ.
ಅಂಕಿತಾ ಬುಧವಾರ ಸಂಜೆ ಉಕ್ರೇನ್‌ನಿಂದ ಪೋಲಂಡ್‌ಗೆ ಹೊರಟಿದ್ದು, ರಾತ್ರಿ 10.30ಕ್ಕೆ ವಿಮಾನದಲ್ಲಿ ಹೊರಟಿದ್ದರು. 48 ಮಂದಿಯಿದ್ದ ವಿಮಾನವು ಗುರುವಾರ ಬೆಳಗ್ಗೆ 11.30ಕ್ಕೆ ಹೊಸದಿಲ್ಲಿಗೆ ತಲುಪಿದೆ. ಅಲ್ಲಿಂದ ಸಂಜೆ 6 ಗಂಟೆಗೆ ಮುಂಬಯಿಗೆ ವಿಮಾನದಲ್ಲಿ ಬಂದು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಒಂದೆರಡು ದಿನಗಳಲ್ಲಿ ಊರಿಗೆ ಬರಲಿದ್ದಾರೆ.
ಅಂಕಿತಾ 5 ತಿಂಗಳ ಹಿಂದಷ್ಟೇ ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಅಲ್ಲಿನ ವಿ.ಎನ್. ಕಾರ್ಜಿನ್ ಕಾರ್‌ಕೀವ್ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜು ಹಾಸ್ಟೆಲ್‌ನಲ್ಲಿದ್ದ ಅವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಭಾರತೀಯ ರಾಯಭಾರ ಅಧಿಕಾರಿಗಳು, ಇಲ್ಲಿನ ಅಧಿಕಾರಿಗಳು ಸಹ ನಿರಂತರ ಸಂಪರ್ಕದಲ್ಲಿದ್ದರು.
ಮನೆಯಲ್ಲಿ ಸಂಭ್ರಮ: ಯುದ್ಧ ಆರಂಭವಾದಂದಿಂದಲೂ ಅಂಕಿತಾ ಜತೆಗೆ ಮನೆಯವರು ನಿರಂತರ ಸಂಪರ್ಕದಲ್ಲಿದ್ದು, ಈಗ ಮಗಳು ತವರಿಗೆ ಬಂದಿರುವುದರಿಂದ ಸಂಭ್ರಮ ಮನೆಮಾಡಿದೆ.
ಪೋಲಂಡ್ ತಲುಪಿದ ಉಜಿರೆಯ ಫಾತಿಮಾ :
ಬೆಳ್ತಂಗಡಿ: ಮಂಗಳವಾರ ರಷ್ಯಾ ದಾಳಿಯಿಂದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳಕ್ಕಿಂತ ಕೇವಲ 200 ಮೀಟರ್ ಅಂತರದಲ್ಲಿ ಅಪಾಯದಲ್ಲಿದ್ದ ಉಜಿರೆಯ ಟಿ.ಬಿ. ಕ್ರಾಸ್‌ನ ನಿವಾಸಿ ದಿ| ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ಗುರುವಾರ ಪೋಲಂಡ್ ತಲುಪಿದ್ದಾರೆ. ಬಳಿಕ ಅವರ ಸಂಪರ್ಕ ಕಡಿತಗೊಂಡಿದೆ.
ವಿದೇಶಾಂಗ ಇಲಾಖೆ ಅವರ ಜತೆ ಸಂಪರ್ಕ ಸಾಧಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಅಲ್ಲಿಂದ ಬುಧವಾರ ದಿವಸ ಅವರನ್ನು ಹೊರಬರುವಂತೆ ನಿರ್ದೇಶಿಸಲಾಗಿತ್ತು. ರೈಲು ಮಾರ್ಗದ ಮೂಲಕ ಕಾರ್ಕಿವ್ ಪ್ರದೇಶದದಿಂದ 1000 ಕಿ.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣ ಬೆಳೆಸಿ ಗುರುವಾರ 12.45ಕ್ಕೆ ತಲುಪಿದ್ದಾರೆ. ಬಿಸ್ಕತ್, ಬನ್, ನೀರು ಕೂಡ ಇಲ್ಲದೆ ಅಷ್ಟು ದೂರ ಕ್ರಮಿಸಿದ್ದಾರೆ. ರೈಲಿನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ನೂಕುನುಗ್ಗಲಿನ ಪರಿಸ್ಥಿಯ ನಡುವೆ ಜೀವ ಉಳಿಸಿಕೊಳ್ಳುವ ಸಲುವಾಗಿ ಗಡಿ ಪ್ರದೇಶಕ್ಕೆ ತಲುಪಲು ಅಲ್ಲಿನ ಮಂದಿ ಹರಸಾಹಸ ಪಡುತ್ತಿದ್ದಾರೆ. ರೈಲಿನಲ್ಲಿ ಉಕ್ರೇನ್ ಪ್ರಜೆಗಳಿಗೆ ಆದ್ಯತೆ ನೀಡಿ ಬಳಿಕ ಇತರ ದೇಶದ ಮಹಿಳೆಯರಿಗಷ್ಟೆ ಪ್ರಾಶಸ್ತ್ಯ ನೀಡಲಾಗುತ್ತಿದೆಯಂತೆ. ಪುರುಷರು ಕಾಲ್ನಡಿಗೆಯ ಮೂಲಕ ಬರುವ ಸಾಹಸ ನಡೆಸಬೇಕಿದೆ ಎಂದು ಹೀನಾ ತಿಳಿಸಿದ್ದಾರೆ.
ಹೀನಾ ಅವರೊಂದಿಗೆ ಉಳಿದ ಏಳು ಮಂದಿ ಪುಟ್ಟಮಕ್ಕಳು ಸಂಚರಿಸುತ್ತಿದ್ದು, ಬೆಂಗಳೂರಿನ ಯುವತಿಯೂ ಇದ್ದಾರೆ.
ಹೀನಾ ಅವರ ಮಾವ ಆಬಿದ್ ಅಲಿ ಮೂಲಕ ಅವರ ಮನೆಯವರನ್ನು ಡಿಸಿ ಕಚೇರಿಯಿಂದ ಮತ್ತು ಬೆಳ್ತಂಗಡಿ ತಹಶಿಲ್ದಾರ್ ಕಚೇರಿಯಿಂದ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ.
ಹೀನಾ ಫಾತಿಮಾ ಅವರು ನನ್ನ ತಂಗಿಯ ಮಗಳು. ಅವಳು ಮನೆ ತಲುಪುವವರೆಗೆ ನಮಗೆ ಭಯ ಕಾದಿದೆ. ಇದೀಗ ಪೋಲಂಡ್ ತಲುಪಿದ ಮಾಹಿತಿ ಸಿಕ್ಕಿದೆ. ಅವಳ ಕ್ಷಣ ಕ್ಷಣದ ಮಾಹಿತಿಗೆ ಕಾಯುತ್ತಿದ್ದೇವೆ.– ಆಬಿದ್ ಅಲಿ, ಹೀನಾ ಫಾತಿಮಾ ಅವರ ಮಾವ