ಚೆನ್ನೈ: ಕೆಲ ಸಿನಿಮಾಗಳು ಎಂದಿಗೂ ಎವರ್ ಗ್ರೀನ್ ಸಾಲಿನಲ್ಲಿ ನಿಲ್ಲುತ್ತವೆ. ಥಿಯೇಟರ್ ನಿಂದ ಹೋದ ಬಳಿಕವೂ ಪ್ರೇಕ್ಷಕರ ಮನದಲ್ಲಿಅಚ್ಚಾಗಿ ಉಳಿಯುತ್ತದೆ. ಇಂಥ ಸಿನಿಮಾಗಳಲ್ಲಿ 2015 ರಲ್ಲಿ ಬಂದ ಮಲಯಾಳಂ ʼಪ್ರೇಮಂʼ ಸಿನಿಮಾ ಕೂಡ ಒಂದು.
ನಿವಿನ್ ಪೌಲಿ ಹಾಗೂ ಸಾಯಿಪಲ್ಲವಿ ಅವರ ʼಪ್ರೇಮಂʼ ಮಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿರಂಗದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿತ್ತು. ಸಾಯಿಪಲ್ಲವಿ ʼಮಲಾರ್ʼ ಆಗಿ ಕಣ್ಣ ನೋಟದ ಮೂಲಕ ಕಾಲೇಜು ಹರೆಯದವರ ಮನಗೆದ್ದಿದ್ದರು. ನಿವಿನ್ ಪೌಲಿ ಕಾಲೇಜು ಹುಡುಗನಾಗಿ ಮಿಂಚಿದ್ದರು.
ರೊಮ್ಯಾಂಟಿಕ್ ಡ್ರಾಮಾ ಸಿನಿ ಪ್ರೇಕ್ಷಕರ ಮನದಲ್ಲಿ ಫೀಲ್ ಗುಡ್ ಸಿನಿಮಾವಾಗಿ ಅಚ್ಚಾಗಿತ್ತು. ಇಂದಿಗೂ ʼಪ್ರೇಮಂʼ ಸಿನಿಮಾದ ದೃಶ್ಯ ಹಾಗೂ ಹಾಡುಗಳಿಗೆ ಪ್ರತ್ಯೇಕ ಅಭಿಮಾನಿಗಳ ವರ್ಗವೇ ಇದೆ. ಅಲ್ಫೋನ್ಸ್ ಪುತ್ರೆನ್ ಅವರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದ ಬಳಿಕ ಸಿನಿಮಾ ರೀ – ರಿಲೀಸ್ ಕೂಡ ಆಗಿತ್ತು.
2016 ಮತ್ತು 2017ರಲ್ಲಿ ʼಪ್ರೇಮಂʼ ತಮಿಳುನಾಡಿನಲ್ಲಿ ಎರಡು ಬಾರಿ ರೀ- ರಿಲೀಸ್ ಆಗಿತ್ತು. 2017 ರಲ್ಲಿ ವ್ಯಾಲೆಂಟೈನ್ಸ್ ಡೇ ವಾರಾಂತ್ಯದಲ್ಲಿ ಚೆನ್ನೈನ ಜಾಝ್ ಸಿನಿಮಾಸ್ ನಲ್ಲಿ ʼರಾಜಾ ರಾಣಿʼ ಮತ್ತು ʼವಿನ್ನೈತಾಂಡಿ ವರುವಾಯಾʼ ಜೊತೆಗೆ ಸಿನಿಮಾ ರಿಲೀಸ್ ಆಗಿತ್ತು.
ಇದೀಗ ಮತ್ತೆ ʼಪ್ರೇಮಂʼ ತಮಿಳುನಾಡಿದಲ್ಲಿ ಮರು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಈ ಸಿನಿಮಾಕ್ಕೆ ತಮಿಳುನಾಡಿನಲ್ಲಿ ಅಪಾರ ಪ್ರೇಕ್ಷಕರ ಬಳಗವಿದ್ದು, ಪ್ರೇಮಿಗಳ ದಿನದಂದು ʼಪ್ರೇಮಂʼ ತಮಿಳುನಾಡಿನ ಕೆಲ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ.
ಆದರೆ ಇದುವರೆಗೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ʼಪ್ರೇಮಂʼ ಸಿನಿಮಾದಲ್ಲಿ ನಿವಿನ್ ಪೌಲಿ, ಸಾಯಿ ಪಲ್ಲವಿ, ಮಡೋನಾ ಸೆಬಾಸ್ಟಿಯನ್ ,ಅನುಪಮಾ ಪರಮೇಶ್ವರನ್ ಮುಂತಾದವರು ನಟಿಸಿದ್ದಾರೆ.