Advertisement

ಚಂದನವನದಲ್ಲಿ ನಿವೇದಿತಾ ಸಂಚಾರ

10:25 AM Mar 09, 2020 | mahesh |

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ನಿರ್ದೇಶನದ ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಗಂಗಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ನಿವೇದಿತಾ. ಅವರ ಮೊದಲ ಹೆಸರು ಸ್ಮಿತಾ. ಚಿತ್ರರಂಗಕ್ಕೆ ಬಂದ ನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡ ಈ ಚೆಲುವೆ ಸದ್ಯ ನಿವೇದಿತಾ ಎಂದೇ ಚಂದನವನದಲ್ಲಿ ಪರಿಚಿತರು. ಮೂಲತಃ ಚಿಕ್ಕಮಗಳೂರಿನ ನಿವೇದಿತಾ ಆರಂಭದಲ್ಲಿ ಇನ್ಫೋಸಿಸ್‌ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದವರು. ಬಳಿಕ ಬಣ್ಣದ ಲೋಕದತ್ತ ಆಕರ್ಷಿತರಾದರು. ಅನುಪಮ್‌ ಖೇರ್‌ ಅವರ ಅಭಿನಯ ತರಬೇತಿ ಸಂಸ್ಥೆಯಲ್ಲಿ ಕೆಲಕಾಲ ತರಬೇತಿ ಪಡೆದುಕೊಂಡು ಬೆಳ್ಳಿತೆರೆಯಲ್ಲಿ ಸಕ್ರಿಯರಾದರು. ತನ್ನ ಸಹಜ ಅಭಿನಯದ ಮೂಲಕ ಚಿತ್ರರಂಗದ ಗಮನ ಸೆಳೆದ ನಿವೇದಿತಾ, 2008ರಲ್ಲಿ ಅವ್ವ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿಯಾಗಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಾಕೆ. ಬಳಿಕ ಕನ್ನಡದ ಜೊತೆ ಜೊತೆಗೆ ತಮಿಳು ಚಿತ್ರರಂಗದಲ್ಲೂ ಸಕ್ರಿಯರಾದ ನಿವೇದಿತಾ ಅಲ್ಲೂ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಅವರು ಅಭಿನಯಿಸಿದ ಡಿಸೆಂಬರ್‌-2 ಚಿತ್ರ ಅವರಿಗೆ 2014ರಲ್ಲಿ ಅತ್ಯುತ್ತಮ ನಾಯಕನಟಿ ಎಂಬ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು. 2017ರಲ್ಲಿ ನಿವೇದಿತಾ ಅಭಿನಯಿಸಿದ್ದ ಶುದ್ಧಿ ಚಿತ್ರ ಕೂಡ ಅವರನ್ನು ಫಿಲಂಫೇರ್‌ ಮತ್ತು ಸೈಮಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಲ್ಲಿ ಯಶಸ್ವಿಯಾಗಿತ್ತು.

Advertisement

ಪ್ರತಿಭೆ ಮತ್ತು ಸೌಂದರ್ಯ ಎರಡನ್ನೂ ಹೊಂದಿರುವ ನಿವೇದಿತಾ, ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನೈದು ವರ್ಷಗಳಾಗಿವೆ. ಈ ಅವಧಿಯಲ್ಲಿ ಕನ್ನಡ, ತಮಿಳು ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರೇಕ್ಷಕರು ಗುರುತಿಸುವಂಥ ಪಾತ್ರಗಳಲ್ಲಿ ಕಾಣಿಸಿಕೊಂಡು, ಮತ್ತೆ ಕೆಲಕಾಲ ಇದ್ದಕ್ಕಿದ್ದಂತೆ ಚಿತ್ರರಂಗದಲ್ಲಿ ದೂರವಾದರು. ಇದೀಗ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಬರುತ್ತಿದ್ದಾರೆ.

ಕಳೆದ ಎರಡು-ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳದಿದ್ದ ನಿವೇದಿತಾ, ಈಗ ಮತ್ತೆ ಬಿಗ್‌ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದ ಮೂಲಕ ಎಂಟ್ರಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ದೇವಿ ಎನ್ನುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿವೇದಿತಾಗೆ ಈ ಪಾತ್ರ ಸಾಕಷ್ಟು ಹೆಸರು ತಂದುಕೊಡುತ್ತಿದೆ. ಚಿತ್ರವನ್ನು ನೋಡಿದವರು ನಿವೇದಿತಾ ಅವರ ಅಭಿನಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ನಿವೇದಿತಾಗೂ ಇಂಥದ್ದೊಂದು ಪಾತ್ರ ಮಾಡಿರುವುದರ ಬಗ್ಗೆ ಖುಷಿ ಇದೆ. “ತುಂಬ ದಿನಗಳ ನಂತರ ಜನರು ಗುರುತಿಸುವಂಥ ಒಂದೊಳ್ಳೆ ಪಾತ್ರದ ಮೂಲಕ ಜನರ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುವ ನಿವೇದಿತಾ, “ಇಂಥದ್ದೇ ಹೊಸತರದ ಪಾತ್ರಗಳಲ್ಲಿ ಮುಂದೆಯೂ ಬರುತ್ತೇನೆ. ಆದರೆ, ಯಾವಾಗ ಅಂಥ ಈಗಲೇ ಹೇಳಲಾರೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next