ಮಣಿಪಾಲ: ಬಂಗಾಲಕೊಲ್ಲಿಯಿಂದ ನಿವಾರ್ ಚಂಡಮಾರುತವು ಗಂಟೆಗೆ 11 ಕಿ.ಮೀ ವೇಗದೊಂದಿಗೆ ಪುದುಚೇರಿಗೆ ಅಪ್ಪಳಿಸಲಿದೆ. ಇಂದು (ಬುಧವಾರ) ರಾತ್ರಿ 2 ಗಂಟೆಗೆ ಅದು ದಕ್ಷಿಣ ಕರಾವಳಿಯನ್ನು ಅಪ್ಪಳಿಸಲಿದ್ದು, ಅನಂತರ ಕಾರೈಕಲ್ (ಆಂಧ್ರಪ್ರದೇಶ) ಮತ್ತು ಮಹಾಬಲಿಪುರಂ (ತಮಿಳುನಾಡು) ದಾಟಲಿದೆ. ಈ ನಡುವೆ ಗಾಳಿಯು ಗಂಟೆಗೆ 145 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ.
ಚಂಡಮಾರುತದ ಅಪಾಯದಿಂದ ಪಾರಾಗುವ ಸಲುವಾಗಿ ರಾಜ್ಯ ಸರಕಾರಗಳು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ. ಈ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ. ನೆರೆಯ ರಾಜ್ಯಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ಚೆನ್ನೈ ವಿಮಾನ ನಿಲ್ದಾಣವನ್ನು ಬುಧವಾರ ಸಂಜೆ 7 ರಿಂದ ಗುರುವಾರ ಬೆಳಗ್ಗೆ 7 ರ ವರೆಗೆ ಮುಚ್ಚಲಾಗಿದೆ. 26 ವಿಮಾನಗಳನ್ನು ರದ್ದುಪಡಿಸಲಾಗಿದೆ. ಚೆನ್ನೈನ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಚೆನ್ನೈ, ವೆಲ್ಲೂರು, ಕಡಲೂರು, ವಿಲ್ಲುಪುರಂ, ನಾಗಪಟ್ಟಣಂ, ತಿರುವರೂರು, ಚೆಂಗಲ್ಪಟ್ಟು ಮತ್ತು ಪೆರಂಬಲೋರ್ ಮುಂತಾದ ನಗರಗಳು ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ನವೆಂಬರ್ 26 ರ ವರೆಗೆ ರಜೆಯನ್ನು ಘೋಷಿಸಲಾಗಿದೆ. ಒಂದು ಲಕ್ಷ ಜನರನ್ನು ತಮಿಳುನಾಡಿನಿಂದ ಸ್ಥಳಾಂತರಿಸಲಾಗಿದ್ದು, 7 ಸಾವಿರ ಜನರನ್ನು ಪುದುಚೇರಿಯಿಂದ ಸ್ಥಳಾಂತರಿಸಲಾಗಿದೆ.
ತಮಿಳುನಾಡು, ಪುದುಚೇರಿ ಮತ್ತು ಆಂಧ್ರದಲ್ಲಿ 25 ತಂಡಗಳನ್ನು ಎನ್‌ಡಿಆರ್‌ಎಫ್ ನಿಯೋಜಿಸಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಂಡ ಸನ್ನದ್ಧವಾಗಿದೆ.
ನಿರಂತರ ಮಳೆ
ಕಳೆದ 24 ಗಂಟೆಗಳಿಂದ ಚೆನ್ನೈನಲ್ಲಿ ಮಳೆಯಾಗುತ್ತಿದೆ. ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಮಾಜಿ ಸಿಎಂ ಕರುಣಾನಿಧಿ ಅವರ ಮನೆಯೂ ಪ್ರವಾಹಕ್ಕೀಡಾಗಿದೆ. ಚೆನ್ನೈನಲ್ಲಿ 2015ರಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪಾಠಗಳನ್ನು ಸರಕಾರ ನೆನಪಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಶೇ. 90ರಷ್ಟು ತುಂಬಿದ ಚೇಂಬರ್ಂಬಕ್ಕಂ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ ಅಣೆಕಟ್ಟಿನಿಂದ 1000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಅಣೆಕಟ್ಟಿನಿಂದ ನೀರು ಅಡ್ಯಾರ್ ನದಿಗೆ ಹರಿಯಲಿದ್ದು, ನದಿಯ ಪ್ರದೇಶದ ಕೆಳಭಾಗಗಳಾದ ಕುಂದ್ರಾತೂರ್, ಸಿರುಕಲಥೂರ್, ತಿರುಮುಡಿವಕ್ಕಂ, ಮತ್ತು ತಿರುನಿರಾಮಲೈ ಮೊದಲಾದ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯ ಕ್ರಮಗಳ ಮಾಹಿತಿ ಪಡೆದುಕೊಂಡಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಎರಡೂ ಸಿಎಂಗಳಿಗೆ ಪ್ರಧಾನಿ ಭರವಸೆ ನೀಡಿದ್ದಾರೆ.
ಚಂಡಮಾರುತದ ಪರಿಣಾಮವನ್ನು ಎದುರಿಸಲು ಬಂಗಾಲಕೊಲ್ಲಿಯ ಆಗ್ನೇಯದಲ್ಲಿರುವ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಬಳಿ ಕೋಸ್ಟ್ ಗಾರ್ಡ್‌ನ 8 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ. ಇನ್ನು ವ್ಯಾಪಾರಿ ಹಡಗುಗಳು ಮತ್ತು ಮೀನುಗಾರಿಕೆ ದೋಣಿಗಳಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.