ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು ಫಿಟ್ ಆ್ಯಂಡ್ ಫೈನ್ ಆಗಿ, ಗ್ಲಾಮರಸ್ ಆಗಿ ಇರಲು ಬಯಸುತ್ತಾರೆ. ಅದರಲ್ಲೂ ಹೀರೋಯಿನ್ಸ್ ಆಗಿರುವವರಂತೂ ತಮ್ಮ ಫಿಟ್ನೆಸ್, ಗ್ಲಾಮರ್ ಬಗ್ಗೆ ಇನ್ನಿಲ್ಲದಂತೆ ಕಾಳಜಿ ತೆಗೆದುಕೊಳ್ಳುತ್ತಿರುತ್ತಾರೆ. ಹೀಗಿರುವಾಗ, ಯಾರಾದರೂ ತಮ್ಮ ಫಿಟ್ನೆಸ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರೆ, ನೆಗೆಟಿವ್ ಕಾಮೆಂಟ್ಸ್ ಮಾಡಿದರೆ ಅವರಿಗೆ ಹೇಗಾಗಬಹುದು? ಅದಕ್ಕೆ ಈಗ ಸಿಗುತ್ತಿರುವ ತಾಜಾ ಉದಾಹರಣೆ ಅಂದ್ರೆ ನಿತ್ಯಾ ಮೆನನ್.
ಹೌದು, “ಜೋಶ್’ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಿತ್ಯಾ ಮೆನನ್, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆದ ಹುಡುಗಿ. ಬಳಿಕ “ಮೈನಾ’ ಹಾಗೂ “ಕೋಟಿಗೊಬ್ಬ-2′ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದ ನಿತ್ಯಾಗೆ ಆ ಚಿತ್ರಗಳು ಸಾಕಷ್ಟು ಹೆಸರು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಕನ್ನಡದ ಜೊತೆಯಲ್ಲೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲೂ ಸಕ್ರಿಯವಾಗಿದ್ದ ನಿತ್ಯಾ, ಅನೇಕ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವಾಕೆ.
ಇವೆಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ನಿತ್ಯಾ ಮೆನನ್ ಅವರ ಫಿಟ್ನೆಸ್ ಕುರಿತು ಅವರ ಫ್ಯಾನ್ಸ್ ಚರ್ಚೆ ಶುರು ಮಾಡಿದ್ದು, ಇತ್ತೀಚೆಗೆ ನಿತ್ಯಾ ಸ್ವಲ್ಪ ದಪ್ಪ ಆಗುತ್ತಿದ್ದಾರೆ ಎಂದು ಸ್ವತಃ ಅವರ ಅಭಿಮಾನಿಗಳೇ ಕಾಲೆಳೆಯುತ್ತಿದ್ದಾರೆ. ತನ್ನ ಫಿಟ್ನೆಸ್ ಬಗ್ಗೆ ದಿನಾ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್ ನಿತ್ಯಾಗೆ ನಿತ್ಯ ಕಿರಿಕಿರಿಯನ್ನುಂಟು ಮಾಡುತ್ತಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುವರ ವಿರುದ್ದ ನಿತ್ಯಾ ಗುಟುರು ಹಾಕಿದ್ದಾರೆ.
“ಜನ ಸಾಮಾನ್ಯರಲ್ಲಿ ಕೆಲವರು ಅಜ್ಞಾನ ಹೊಂದಿದ್ದಾರೆ. ಯಾಕಂದ್ರೆ, ಯಾರಾದರೂ ತೂಕದ ಸಮಸ್ಯೆ ಎದುರಿಸುತ್ತಿದ್ದರೇ ಅವರು ಸೋಮಾರಿ ಅಥವಾ ತಿಂಡಿಪೋತಿ ಅದಕ್ಕೆ ದಪ್ಪಕ್ಕೆ ಆಗಿದ್ದಾರೆ ಎನ್ನುವುದು ತಪ್ಪು. ತಿನ್ನುವುದರಿಂದ, ಸೋಮಾರಿತನದಿಂದ ಯಾರೂ ದಪ್ಪ ಆಗಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಲ್ಲ. ಕೆಲವು ಹಾರ್ಮೋನ್ ಸಮಸ್ಯೆಗಳಿಂದಲೂ ತೂಕ ಹೆಚ್ಚಾಗುತ್ತದೆ. ನಾವು ಸುಮ್ಮನೆ ಕೂತು ಎಂಜಾಯ್ ಮಾಡ್ತಿಲ್ಲ. ಇಂಥ ಕಾಮೆಂಟ್ಸ್ ನಮಗೆ ಬೇಸರ ಉಂಟು ಮಾಡುತ್ತೆ.
ಮಾತನಾಡುವ ಮೊದಲು ಜನರು ಈ ಬಗ್ಗೆ ಅರಿವು ಹೊಂದಿರಬೇಕು’ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಿತ್ಯಾ ಯಾರಿಗೂ ಈ ಥರ ನೆಗೆಟಿವ್ ಕಾಮೆಂಟ್ಸ್ ಮಾಡಬೇಡಿ ಎಂದಿದ್ದಾರೆ. ಇನ್ನು ನಿತ್ಯಾ, ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿದ್ದು, ತಮ್ಮ ದೇಹದ ತೂಕ ಹೆಚ್ಚಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆರಂಭದಿಂದಲೂ ನಿತ್ಯಾ ಮೆನನ್ ಎತ್ತರ ಕಡಿಮೆ, ಬೇರೆ ಭಾಷೆಯಲ್ಲಿ ನಿತ್ಯಾಗೆ ಅವಕಾಶಗಳು ಸಿಗುವುದು ಕಷ್ಟ ಎಂಬ ಮಾತುಗಳ ನಡುವೆಯೇ ಸಿನಿ ಜರ್ನಿ ಶುರು ಮಾಡಿರುವ ನಿತ್ಯಾ ಮೆನನ್,
ಸದ್ಯ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು, ಹಿಂದಿಯಲ್ಲಿ ಭಾಷೆಗಳಲ್ಲೆ ಬಿಝಿಯಾಗಿದ್ದಾರೆ. ಇತ್ತೀಚೆಗಷ್ಟೆ “ಮಿಷನ್ ಮಿಂಗಲ್’ ಚಿತ್ರದಲ್ಲಿ ನಟಿಸಿದ್ದ ನಿತ್ಯಾ, ಮುಂಬರಲಿರುವ “ಕೊಲಾಂಬಿ’, “ದಿ ಐರನ್ ಲೇಡಿ’, “ಸೈಕೋ’, “ಅರಾಮ್ ತಿರುಕಲ್ಪನಾ’ ಎಂಬ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದೇನೆಯಿರಲಿ, ನಿತ್ಯಾ ಮೆನನ್ ತಮ್ಮ ಫಿಟ್ನೆಸ್ ಕಾಮೆಂಟ್ಸ್‌ಗೆ ನೀಡಿರುವ ಪ್ರತಿಕ್ರಿಯೆಗೆ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆಯಂತೂ ವ್ಯಕ್ತವಾಗುತ್ತಿದೆ.