Advertisement
ನಿಟ್ಟೂರು: ವೆಟ್‌ವೆಲ್‌ಗಳ ಕಥೆ ಒಂದು ಬಗೆಯದ್ದಾದರೆ, ತ್ಯಾಜ್ಯ ನೀರನ್ನು ಶುದ್ಧೀಕರಿಸಬೇಕಾದ ಘಟಕ (ಎಸ್‌ಟಿಪಿ) ಸ್ಥಿತಿ ಇನ್ನೂ ಶೋಚನೀಯ.
Related Articles
ನಿಟ್ಟೂರು ಬಳಿ ಹತ್ತು ಎಕರೆ ಪ್ರದೇಶದಲ್ಲಿ 2007ರಲ್ಲಿ ಈ ಶುದ್ಧೀಕರಣ ಘಟಕವನ್ನು ಆರಂಭಿಸಲಾಯಿತು. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅನುದಾನದಡಿ ಕುಡ್ಸೆಂಪ್ ಇದನ್ನು ನಿರ್ಮಿಸಿತ್ತು. 12 ಎಂಎಲ್‌ಡಿ ಶುದ್ಧೀಕರಿಸಿ ಇಂದ್ರಾಣಿ ತೀರ್ಥ ನದಿಗೆ (ಕಲ್ಸಂಕ ತೋಡು) ಬಿಟ್ಟು, ಆ ಮೂಲಕ ಉದ್ಯಾವರ ನದಿ ಮುಖೇನ ಸಮುದ್ರಕ್ಕೆ ಬಿಡುವುದೆಂದು ತೀರ್ಮಾನಿಸಿ ಯೋಜನೆ ಜಾರಿಗೊಳಿಸಲಾಗಿತ್ತು. ಒಟ್ಟು 5.5 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗಿತ್ತು. ಆದರೆ ಈಗ ಅದು ಸಂಪೂರ್ಣ ರೋಗಗ್ರಸ್ತವಾಗಿದೆ.
Advertisement
ಎರಡು ನಿಂತು ಹಲವು ವರ್ಷಸುದಿನ ಅಧ್ಯಯನ ತಂಡವು ಎಸ್‌ಟಿಪಿ ಹಾಗೂ ಅದರಿಂದ ಇಂದ್ರಾಣಿ ನದಿ ತೀರ್ಥಕ್ಕೆ ನೀರು ಸೇರುವ ಭಾಗದಲ್ಲೆಲ್ಲಾ ಭೇಟಿ ನೀಡಿತ್ತು. ಅಲ್ಲಿ ಕಂಡು ಬರುವ ಚಿತ್ರಣವೇ ಬೇರೆ. ಸ್ಥಳೀಯರು ಹೇಳುವ ಪ್ರಕಾರ ಈ ಘಟಕದಲ್ಲಿನ ಎರಡು ಗ್ರಿಪ್ಪರ್‌ಗಳು ನಿಂತು ಹಲವು ವರ್ಷಗಳಾಗಿವೆ. ಅವರ ಪ್ರಕಾರ, ಆ ಗ್ರಿಪ್ಪರ್‌ಗಳು ಕಾರ್ಯ ನಿರ್ವಹಿಸುವಾಗ ಕೆಲವೊಮ್ಮೆ ದುರ್ನಾತ ಹೆಚ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ವಿರೋಧವೂ ಬಂದ ಕಾರಣ ಸ್ಥಗಿತಗೊಳಿಸಲಾಯಿತು. ಐದು ಗ್ರಿಪ್ಪರ್‌ಗಳು ವಿವಿಧ ಹಂತಗಳಲ್ಲಿ ಶುದ್ಧೀಕರಿಸುತ್ತವೆ. ಈ ಎರಡು ಗ್ರಿಪ್ಪರ್‌ಗಳು ನಿಂತ ಕಾರಣ ನೀರು ಹಸಿರುಗಟ್ಟಿದೆ. ಮತ್ತೂಂದು ಹಾಳಾಗಿದ್ದು, ರಫಿಂಗ್ ಫಿಲ್ಟರ್ ಹಾಳಾಗಿದೆ. ಲಭ್ಯ ಮಾಹಿತಿ ಪ್ರಕಾರ, ಅದು ಹಾಳಾಗಿ ಈಗಾಗಲೇ ಆರು ತಿಂಗಳು ಕಳೆದಿದೆ. ಅದು ದುರಸ್ತಿಗೊಳ್ಳುವವರೆಗೆ ಏನೂ ಮಾಡುವಂತಿಲ್ಲ.
ಸ್ಥಳೀಯ ಸಿಬಂದಿಯೊಬ್ಬರು ಹೇಳು ವಂತೆ, ಎಂದಿಗೂ ತ್ಯಾಜ್ಯ ನೀರನ್ನು ಶುದ್ಧೀಕ ರಿಸದೇ ನೇರವಾಗಿ ಇಂದ್ರಾಣಿ ನದಿ ತೀರ್ಥಕ್ಕೆ ಬಿಡುವುದಿಲ್ಲ. ರಾತ್ರಿ ಮತ್ತು ಬೆಳಗ್ಗೆ ಹೊತ್ತಿನಲ್ಲಿ ಸೂರ್ಯನ ಶಾಖ ಕಡಿಮೆ ಇದ್ದು, ಮಂಜು ಆವರಿಸಿರುವ ಸಂದರ್ಭದಲ್ಲಿ ಶುದ್ಧೀಕರಿಸಿದ ನೀರೂ ಸಹ ವಾಸನೆ ಬರುತ್ತದೆ, ಮಧ್ಯಾಹ್ನದ ಹೊತ್ತಿಗೆ ಅದೇ ನೀರು ಬರುವಾಗ ವಾಸನೆ ಬಾರದು ಎನ್ನುತ್ತಾರೆ. ಇದನ್ನು ನೇರವಾಗಿ ನಿರಾಕರಿಸುವ ಸ್ಥಳೀಯರು, ಇಲ್ಲ. ತ್ಯಾಜ್ಯ ನೀರನ್ನು ಬಿಡು ವುದರಿಂದಲೇ ದೊಡ್ಡ ಸಮಸ್ಯೆಯಾಗುತ್ತಿದೆ. ಅವರು ಶುದ್ಧೀಕರಿಸುವುದಿಲ್ಲ ಎನ್ನುತ್ತಾರೆ. ಕೇವಲ ಕಾಲು ಭಾಗದಷ್ಟು ಒಳಚರಂಡಿ ಕಲ್ಪಿಸಿ, ಅರ್ಧದಷ್ಟು ದ್ರವ ತ್ಯಾಜ್ಯ ಸಂಗ್ರಹಿಸಿ, ಅದನ್ನು ಸಂಪೂರ್ಣವಾಗಿ ಶುದ್ಧೀಕರಿಸದೇ, ಅವುಗಳ ಎಲ್ಲ ಘಟಕಗಳನ್ನು ಸುಸ್ಥಿತಿಯಲ್ಲಿಡದಿರುವುದು ಘಟಕದ ನಿರ್ವಹಣೆ ಸಾಮರ್ಥ್ಯವನ್ನೇ ಪ್ರಶ್ನಿಸಿದಂತಾಗಿದೆ. ಉಡುಪಿ ನಗರಕ್ಕೆ ಇಷ್ಟು ಸಾಕೇ?
ಈ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಬೆಳೆಯುತ್ತಿರುವ ನಗರ ದಲ್ಲಿ ಉತ್ಪತ್ತಿಯಾಗುವ ದ್ರವ ತ್ಯಾಜ್ಯಕ್ಕೆ ಸರಾಸರಿ ಈ ಘಟಕ ಸಾಕೇ ಎಂಬ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ. ಪ್ರಸ್ತುತ ಉಡುಪಿಯಲ್ಲಿರುವ ಜನಸಂಖ್ಯೆ 1.25 ಲಕ್ಷ (2011ರ ಜನಗಣತಿಯಂತೆ) ಇದೆ. 2020 ರಲ್ಲಿ ಮತ್ತೆ ಜನಗಣತಿ ನಡೆಯಲಿದ್ದು, ಹೊಸ ಅಂಕಿ ಅಂಶ 2021 ರಲ್ಲಿ ಲಭ್ಯವಾಗಲಿದೆ. 2011ರ ಜನಗಣತಿ ಲೆಕ್ಕದಲ್ಲೇ ನಿತ್ಯವೂ 21.6 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಆದರೆ ಇದರ ಕೆಲವು ಪ್ರಮಾಣ ಮಾತ್ರ ಶುದ್ಧೀಕರಿಸಲು ಸಾಧ್ಯವಾಗಿದೆ. ನಗರದ ಒಟ್ಟು ವ್ಯಾಪ್ತಿಯ ಶೇ. 25 ರಷ್ಟು ಜಾಗಕ್ಕೆ ಮಾತ್ರ ಒಳಚರಂಡಿ ಅನ್ವಯಿಸಲಾಗಿದೆ. ಜನಸಂಖ್ಯಾವಾರು ಹೇಳುವುದಾದರೆ ಶೇ. 40ರಷ್ಟು . ಈಗ ಆಗಿರುವುದೇನು?
ಪ್ರಸ್ತುತ ನಿಟ್ಟೂರು ಘಟಕದ ಎಲ್ಲ ಗ್ರಿಪ್ಪರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಒಟ್ಟು ಐದು ಹಂತದಲ್ಲಿ ಇಲ್ಲಿ ದ್ರವ ತ್ಯಾಜ್ಯವನ್ನು ಶುದ್ಧೀಕರಿಸಲಾಗುತ್ತದೆ. ಐದೂ ಗ್ರಿಪ್ಪರ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಅದರ ಪೂರ್ಣ ಸಾಮರ್ಥ್ಯ ಬಳಕೆಯಾದಂತೆ. ಆದರೆ, ಪ್ರಸ್ತುತ 2 ಗ್ರಿಪ್ಪರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಶುದ್ಧೀಕರಿಸಲು ಸಾಧ್ಯವಾಗುವುದು ಕೇವಲ ದಿನವೊಂದಕ್ಕೆ 4 ರಿಂದ 5 ಎಂಎಲ್‌ಡಿ ಮಾತ್ರ. ಇದು ದಿನವೂ 21 ಮಿಲಿಯನ್ ಲೀಟರ್ ಉತ್ಪತ್ತಿಯಾಗುವ ದ್ರವ ತ್ಯಾಜ್ಯ ನಿರ್ವಹಣೆಗೆ ಏನೂ ಸಾಲದು. ಮಠದಬೆಟ್ಟು ಮತ್ತು ಕರಾವಳಿ ಬೈಪಾಸ್ ಬಳಿಯ ವೆಟ್‌ವೆಲ್‌ನಿಂದ ಬರುವ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಉಳಿದ ಎರಡು (ಕಿನ್ನಿಮೂಲ್ಕಿ ಮತ್ತು ನಾಯರ್‌ಕೆರೆ) ಸಂಪರ್ಕಗಳನ್ನೂ ಈ ವೆಟ್‌ವೆಲ್ ಮೂಲಕ ಹರಿಸಲಾಗುತ್ತಿದೆ. ಯಾವುದೇ ವೆಟ್‌ವೆಲ್‌ನಲ್ಲಿ ಕರೆಂಟ್ ಕೈ ಕೊಟ್ಟರೆ ತ್ಯಾಜ್ಯ ನೀರು ಹರಿಯುವುದು ನೇರವಾಗಿ ಇಂದ್ರಾಣಿ ನದಿ ತೀರ್ಥಕ್ಕೆ ಎನ್ನುತ್ತಾರೆ ಸ್ಥಳೀಯರು. ವೆಟ್‌ವೆಲ್‌ಗೆ ಅಧಿಕಾರಿಗಳ ಭೇಟಿ
ಮಠದಬೆಟ್ಟು: ಐದು ದಿನ ಗಳಿಂದ ನಿರಂತರವಾಗಿ ಇಂದ್ರಾಣಿ ನದಿ ತೀರ್ಥದ ದುಃಸ್ಥಿತಿ ಕುರಿತು ಉದಯ ವಾಣಿಯ ಸುದಿನ ಅಧ್ಯಯನ ತಂಡ ಸವಿಸ್ತಾರವಾಗಿ ವರದಿ ಮಾಡುತ್ತಿದೆ.ಈ ಹಿನ್ನೆಲೆಯಲ್ಲಿ ವರದಿಗಳಿಗೆ ಸ್ಪಂದಿಸಿರುವ ನಗರಸಭೆ ಅಧಿಕಾರಿಗಳು ಸೋಮವಾರ ಮಠದಬೆಟ್ಟು ವೆಟ್‌ವೆಲ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಗರಸಭೆಯ ಎಇಇ ಮೋಹನ್ ರಾಜ್ ಮತ್ತು ಐದು ಮಂದಿ ತಾಂತ್ರಿಕರ ತಂಡವು ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉದಯವಾಣಿ ಪ್ರತಿನಿಧಿಗೆ ಮಾತನಾಡಿ, “ಉದಯವಾಣಿಯ ವರದಿ ಯನ್ನು ನಿತ್ಯವೂ ನೋಡುತ್ತಿದ್ದೇವೆ. ಇಂದ್ರಾಣಿ ನದಿ ತೀರ್ಥದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು. “ಇಲ್ಲಿನ ವೆಟ್‌ವೆಲ್‌ಗಳು ಬಹಳ ಹಳೆಯದು. ಆಗಿನ ಕಾಲಕ್ಕೆ ಸರಿ ಇದ್ದಿಬಹುದು. ಆದರೆ ಈಗ ವಾಸ್ತವವಾಗಿ ಒಂದಕ್ಕೆ ಮತ್ತೂಂದು ಪರ್ಯಾಯವಾಗಿ ವೆಟ್‌ವೆಲ್ (ಒಟ್ಟು ಎರಡು) ಗಳನ್ನು ನಿರ್ಮಿಸಬೇಕು. ಆಗ ಒಂದರಲ್ಲಿ ಮೋಟಾರ್ ಕೆಟ್ಟಾಗ, ಮತ್ತೂಂದಕ್ಕೆ ನೀರನ್ನು ವರ್ಗಾಯಿಸಿ ಈ ಮೋಟಾರ್ ತೆಗೆದು ಸರಿಪಡಿಸಬಹುದು. ಆದರೆ ಇಲ್ಲಿ ಆ ವ್ಯವಸ್ಥೆ ಇಲ್ಲ’ ಎಂದರು. ಮಠದಬೆಟ್ಟುವಿಗೆ ಬರುವ ಪೈಪ್ ಲೈನ್ ಸಹ ಒಡೆದು ಹೋಗಿದ್ದು, ಅದನ್ನು ತೆಗೆದು ಬೇರೆ ಹಾಕಲು ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ ಮೋಹನರಾಜ್, ತ್ಯಾಜ್ಯ ನೀರು ನಿರ್ವಹಣೆ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಿರಿಯ ಸಹಾಯಕ ಎಂಜಿನಿಯರ್‌ಗಳಾದ ದುರ್ಗಾ ಪ್ರಸಾದ್, ರಾಜಶೇಖರ್ ಹಾಗೂ ನಗರಸಭೆ ಸಿಬಂದಿ ರಾಜೇಶ್ ಜತೆಗಿದ್ದರು.