Advertisement

ನಿಟ್ಟೂರು ರಾ.ಹೆ.: ಪಾಳುಬಿದ್ದ ಬಸ್‌ ನಿಲ್ದಾಣ;  ಬಿಸಿಲಿನಲ್ಲೇ ಕಾಯುವ ಪ್ರಯಾಣಿಕರು

06:15 PM Feb 11, 2022 | Team Udayavani |

ಉಡುಪಿ: ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರ ಬದಿ ಇರುವ ಬಸ್‌ ನಿಲ್ದಾಣ ಪಾಳು ಬಿದ್ದಿದ್ದು, ಸಾರ್ವಜನಿಕ ಬಳಕೆಗೆ ನಿರುಪಯುಕ್ತವಾಗಿದೆ.

Advertisement

ರಾ.ಹೆ. ಎರಡೂ ಬದಿಯ ಬಸ್‌ ನಿಲ್ದಾಣ ಕೆಲಸಕ್ಕೆ ಬಾರದ್ದಾಗಿದೆ. ಹೆದ್ದಾರಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಬಸ್‌ ಪ್ರಯಾಣಿಕರಿಗೆ ವ್ಯವಸ್ಥಿತ ತಂಗುದಾಣ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೊಡಂಕೂರು, ನಿಟ್ಟೂರು, ಕೊಡವೂರು, ಮಧ್ವನಗರ ಮೊದಲಾದ ಭಾಗಗಳಿಂದ ಜನರು ಇಲ್ಲಿಗೆ ಆಗಮಿಸಿ ಸ್ಥಳೀಯ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಉದ್ಯೋಗಸ್ಥರು, ವಿದ್ಯಾರ್ಥಿಗಳು ಸಹಿತ ಬೆಳಗ್ಗೆ, ಸಂಜೆ ಅವಧಿಯಲ್ಲಿ ಹೆಚ್ಚು ಪ್ರಯಾಣಿಕರಿಗೆ ಈ ತಂಗುದಾಣ ಆಶ್ರಯವಾಗಿತ್ತು. ಪ್ರಸ್ತುತ ಬಸ್‌ ನಿಲ್ದಾಣದಿಂದ ಜನರು ದೂರವಾಗಿದ್ದಾರೆ. ಬಿಸಿಲಿನಲ್ಲೇ ಬಸ್‌ ಕಾಯುತ್ತ ಪ್ರಯಾಣಿಕರು ನಿಂತಿರುತ್ತಾರೆ. ಮಳೆಗಾಲದಲ್ಲಿ ಮಳೆಯಲ್ಲಿ ನಿಂತು ಕಾಯಬೇಕು. ನಿಲ್ದಾಣ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ.ಎದುರು ಭಾಗದಲ್ಲಿ ರಿಕ್ಷಾ ನಿಲ್ದಾಣ ಸಮೀಪದಲ್ಲಿರುವ ಬಸ್‌ ನಿಲ್ದಾಣ ಪರಿಸ್ಥಿತಿಯೂ ಹೀಗೆ ಇದೆ.

ಅಪರಿಚಿತರ ಅಡ್ಡೆಯಾಗಿದೆ
ಹೆಂಚಿನ ಮಾಡಿನಿಂದ ನಿರ್ಮಿಸಿದ ಅತ್ಯಂತ ಹಳೆ ಕಾಲದ ಬಸ್‌ ನಿಲ್ದಾಣ ಇದಾಗಿದ್ದು, ಹೆಂಚುಗಳೆಲ್ಲ ಉದುರಿ ಕೆಳಗೆ ಬೀಳುತ್ತಿವೆ. ಮಳೆಗಾಲದಲ್ಲಿ ನಿರಂತರ ಸೋರುತ್ತದೆ. ಪ್ರಸ್ತುತ ಬಸ್‌ ನಿಲ್ದಾಣ ಅಪರಿಚಿತರ ಅಡ್ಡೆಯಾಗಿ ಪರಿವರ್ತನೆಗೊಂಡಿದೆ. ಹಗಲು, ರಾತ್ರಿ ಅಪರಿಚಿತರು ಇಲ್ಲಿಯೇ ಮಲಗುವುದು ರಾತ್ರಿ ಮದ್ಯಪಾನ ಗೋಷ್ಠಿಯೂ ನಡೆಯುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀರ ಕಿರಿಕಿರಿಯಾಗಿ ಪರಿಣಮಿಸಿದೆ. ಸಂಜೆ ಬಳಿಕ ಮಹಿಳೆಯರು, ಹೆಣ್ಣು ಮಕ್ಕಳು ಓಡಾಡಲು ಆತಂಕ ಪಡುವ ಪರಿಸ್ಥಿತಿ ಇದೆ.

ಸರಕಾರಿ ನಿಲಯಗಳಿಗೆ ತೊಂದರೆ
ಬಸ್‌ ನಿಲ್ದಾಣ ಸಮೀಪವೆ ಸಖೀ ಒನ್‌ ಸ್ಟಾಪ್‌ ಸೆಂಟರ್‌, ಸ್ಟೇಟ್‌ ಹೋಂ- ಮಹಿಳಾ ನಿಲಯ, ವಿಚಕ್ಷಣಾಲಯ ಕೇಂದ್ರಗಳಿವೆ. ಈ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು ನೆಲೆಸಿದ್ದಾರೆ. ಅಪರಿಚಿ ತರಿಂದ ಈ ಕೇಂದ್ರಗಳ ಪರಿಸರಕ್ಕೆ ತೊಂದರೆ ಯಾಗುವ ಸಾಧ್ಯತೆ ಇದೆ. ಪಾಳು ಬಿದ್ದ ಬಸ್‌ ನಿಲ್ದಾಣವನ್ನು ವ್ಯವಸ್ಥಿತಗೊಳಿಸಿ ಅಪರಿಚಿತರ ತಾಣವಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ನಗರಸಭೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಶೀಘ್ರ ಕ್ರಮಕೈಗೊಳ್ಳಲು ಸೂಚನೆ
ಬಸ್‌ ನಿಲ್ದಾಣ ಅವ್ಯವಸ್ಥೆ ಸಂಬಂಧಿಸಿ ಸ್ಥಳೀಯರಿಂದ ದೂರು ಬಂದ ಕೂಡಲೆ ಹೆದ್ದಾರಿ ಇಲಾಖೆ ಅವರಿಗೆ ಸೂಚನೆ ನೀಡಿದ್ದೆವು. ಈ ಬಗ್ಗೆ ನಗರಸಭೆಯಲ್ಲಿಯೂ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತು. ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ಶೀಘ್ರ ನಗರಸಭೆ ವ್ಯಾಪ್ತಿ ಬಸ್‌ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಕ್ರಮಕೈಗೊಳ್ಳಲು ತಿಳಿಸಲಾಗುವುದು.
– ಸುಮಿತ್ರಾ ಎಸ್‌. ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next