ಸುರತ್ಕಲ್: ಟರ್ಕಿಯಲ್ಲಿನ ಭೀಕರ ಭೂ ಕಂಪನದಿಂದ ಸಾವಿರಾರು ಮಂದಿ ಕಟ್ಟಡದೊಳಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ದೃಶ್ಯಾವಳಿ ಕಣ್ಣಮುಂದೆ ಬರುತ್ತಿರುವಂತೆಯೇ ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆಯ ಪ್ರೊ| ಶ್ರೀವಲ್ಸ ಕೊಳತ್ತಾಯರ್ ಶೋಧಿಸಿದ 5 ವರ್ಷಗಳ ಹಿಂದಿನ ಪ್ರಾಕೃತಿಕ ವಿಕೋಪ ಪೂರ್ವತಯಾರಿ ಇಂಡೆಕ್ಸ್ (ಸೂಚ್ಯಂಕ) ಮತ್ತೆ ಮುನ್ನೆಲೆಗೆ ಬಂದಿದೆ.
ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳಲ್ಲಿ ಪ್ರಾಕೃತಿಕ ವಿಕೋಪದಿಂದ ರಕ್ಷಿಕೊಳ್ಳಲು ಪೂರ್ವ ತಯಾರಿಯ ಕೊರತೆ ಕಂಡು ಬರುತ್ತದೆ. ಭೂಕಂಪ ವಲಯದಲ್ಲಿ ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದಿಂದ ಹೆಚ್ಚಿನ ಸಾವು ಸಂಭವಿಸುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭ ಜನರ ಪೂರ್ವ ತಯಾರಿ ಹೇಗಿರುತ್ತದೆ ಎಂಬ ಬಗ್ಗೆ ಗ್ರಾಮ, ನಗರ, ವಾರ್ಡ್ ಮಟ್ಟದಲ್ಲಿ ಅಧ್ಯಯನ ನಡೆಸಿ ಈ ಇಂಡೆಕ್ಸ್ ತಯಾರಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ಜನತೆ ಮುನ್ಸೂಚನೆಯನ್ನು ಪಾಲಿಸಬೇಕು. ಜೀವ ಉಳಿಸಿಕೊಳ್ಳುವ ಉಪಾಯಗಳು ಮತ್ತಿತರ ವಿಚಾರಗಳನ್ನು ಇದು ಒಳಗೊಂಡಿದೆ.
ಶ್ರೀವಲ್ಸ ಅವರ ಸೂಚ್ಯಂಕದ ಅಳವಡಿಕೆಗೆ ನ್ಯೂಜಿಲ್ಯಾಂಡ್, ಸ್ವಿಜರ್‌ಲ್ಯಾಂಡ್ ದೇಶಗಳು ಆಸಕ್ತಿ ತಳೆದಿದ್ದು, ಅಲ್ಲಿಯ ಹವಾಗುಣಕ್ಕೆ ತಕ್ಕಂತೆ ಸೂಚ್ಯಂಕವನ್ನು ತಯಾರಿಸಿ ಕೊಡಲು ಮಾತುಕತೆ ನಡೆದಿದೆ.
ನಾನು ತಯಾರಿಸಿದ ಪ್ರಾಕೃತಿಕ ವಿಕೋಪ ಪೂರ್ವ ತಯಾರಿ ಸೂಚ್ಯಂಕವನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮತ್ತು ತಯಾರಿ ನಡೆಸಿ ಸನ್ನದ್ಧ ಸ್ಥಿತಿಯಲ್ಲಿರುವಂತೆ ಮಾಡಿದರೆ ಶೇ. 40ರಷ್ಟಾದರೂ ಜೀವ ಹಾನಿ ಕಡಿಮೆ ಮಾಡಲು ಸಾಧ್ಯ. ಸ್ಥಳೀಯ ಆಡಳಿತಗಳು, ರಾಜ್ಯ, ದೇಶದಲ್ಲಿ ಇದು ಕಡ್ಡಾಯವಾಗಿ ಜಾರಿಗೆ ತಂದರೆ ಜನರಲ್ಲಿಯೂ ಸುರಕ್ಷೆಯ ಭಾವನೆ ಹೆಚ್ಚಬಹುದು.
– ಪ್ರೊ| ಶ್ರೀವಲ್ಸ ಕೊಳತ್ತಾಯರ್, ಸಂಶೋಧಕ, ಎನ್‌ಐಟಿಕೆ
ಯಾವೆಲ್ಲ ಮುನ್ನೆಚ್ಚರಿಕೆ ವಹಿಸುವುದರಿಂದ ಪ್ರಾಕೃತಿಕ ವಿಕೋಪದ ಸಂದರ್ಭ ಸಾವು ನೋವು ತಗ್ಗಿಸಲು ಸಾಧ್ಯವಾದೀತು ಎಂಬ ಬಗ್ಗೆ ಶ್ರೀವಲ್ಸ 10 ವರ್ಷಗಳಿಂದ ಅಧ್ಯಯನ ನಡೆಸಿ 14 ಅಂಶಗಳ ಸೂಚ್ಯಂಕ (ಇಂಡೆಕ್ಸ್)ತಯಾರಿಸಿದ್ದಾರೆ. ಅದರ ಅನುಷ್ಠಾನದಿಂದ ಶೇ. 40ರಷ್ಟಾದರೂ ಸಾವು ನೋವು ಕಡಿಮೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ. ಆಹಾರ ದಾಸ್ತಾನು, ನೀರು, ಪ್ರಾಣ ಉಳಿಸಿಕೊಳ್ಳುವ ಉಪಾಯ, ಕಟ್ಟಡ ನಿರ್ಮಾಣ ಹೇಗಿರಬೇಕು, ಮುಂಜಾಗ್ರತೆ, ತರಬೇತಿ ಇದರಲ್ಲಿದೆ. ಪ್ರಸ್ತುತ ಭಾರತದ ಕೆಲವೆಡೆ, ಬಾಂಗ್ಲಾದೇಶ, ಮಲೇಶ್ಯಾ, ಫಿಲಿಪೈನ್ಸ್ ಮೊದಲಾದೆಡೆ ಇದನ್ನು ಬಳಸಲಾಗುತ್ತಿದೆ.