ಮುಂಬಯಿ: ಮುಂಬೈ ಇಂಡಿಯನ್ಸ್ ಬೌಲರ್ ಹೃತಿಕ್ ಶೊಕೀನ್ ಮತ್ತು ಕೆಕೆಆರ್ ನಾಯಕ ನಿತೀಶ್ ರಾಣಾ ನಡುವೆ ಜಗಳ ನಡೆಯಿತು. ಮುಂಬೈ ಉಸ್ತುವಾರಿ ನಾಯಕ ಸೂರ್ಯಕುಮಾರ್ ಯಾದವ್, ಹಿರಿಯ ಆಟಗಾರ ಪೀಯೂಷ್ ಚಾವ್ಲಾ ಸೇರಿಕೊಂಡು ಪರಿಸ್ಥಿತಿಯನ್ನು ತಣ್ಣಗೆ ಮಾಡಿದರು. ಐಪಿಎಲ್ ಎಂದಾಗ ಇಂತಹ ಜಗಳಗಳೆಲ್ಲ ಸಾಮಾನ್ಯ, ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ವಿಶೇಷ ಇದೆ.
ಕೋಲ್ಕತಾ ಬ್ಯಾಟಿಂಗ್‌ನ 9ನೇ ಓವರ್‌ನಲ್ಲಿ ಹೃತಿಕ್ ಶೊಕೀನ್ ಎಸೆತದಲ್ಲಿ ನಿತೀಶ್ ರಾಣಾ ಔಟಾಗಿ ಹೊರ ನಡೆದರು. ಆಗ ನಿತೀಶ್ ಅವರತ್ತ ನೇರವಾಗಿ ದಿಟ್ಟಿಸಿದ ಶೊಕೀನ್ ಏನೋ ಹೇಳಿದರು. ಕೂಡಲೇ ಸಿಟ್ಟಾದ ನಿತೀಶ್ ಹೊರಹೋಗುವ ಬದಲು ಜಗಳಕ್ಕೆ ನಿಂತರು. ಹೇಗೋ ವಿಷಯ ಅಲ್ಲಿಗೆ ಮುಗಿಯಿತು.
ಆದರೆ ಇಬ್ಬರ ಜಗಳಕ್ಕೆ ಒಂದು ಇತಿಹಾಸವೇ ಇದೆ. ಇಬ್ಬರೂ ದಿಲ್ಲಿ ಕ್ರಿಕೆಟ್ ತಂಡದ ಆಟಗಾರರು. ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡರೂ ಪರಸ್ಪರ ಮಾತನಾಡುವುದಿಲ್ಲ. ಆಗಾಗ ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ಅದೇ ಜಗಳ ಇಲ್ಲಿಗೂ ಮುಂದುವರಿದಿದೆ.