Advertisement

ಉಪಸಭಾಪತಿ: ಸ್ಪರ್ಧೆ ಖಚಿತ

10:20 AM Aug 07, 2018 | |

ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಎನ್‌ಡಿಎ ಮತ್ತು ಯುಪಿಎ ಮಧ್ಯೆ ಸ್ಪರ್ಧೆ ಖಚಿತಗೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯ ಮೈತ್ರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡಲಿವೆ. ಎನ್‌ಡಿಎನಿಂದ ಹಿರಿಯ ಪತ್ರಕರ್ತ,  ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಪ್ತ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರು ಅಭ್ಯರ್ಥಿ ಆಗುವ ಸಾಧ್ಯತೆ ನಿಚ್ಚಳವಾಗಿದೆ. ವಿಶೇಷವೆಂದರೆ ಇವರು ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ.  

Advertisement

ಇನ್ನೊಂದೆಡೆ, ಸೋಮವಾರ ಸಂಜೆ ಸಭೆ ನಡೆಸಿದ ವಿಪಕ್ಷಗಳು ಎನ್‌ಡಿಎ ಅಭ್ಯರ್ಥಿಯ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಅಭ್ಯರ್ಥಿಯ ಹೆಸರನ್ನು ಮಂಗಳವಾರ ಘೋಷಿಸಲು ನಿರ್ಧರಿಸಲಾಗಿದೆ. ಡಿಎಂಕೆಯ ತಿರುಚಿ ಶಿವ, ಎನ್‌ಸಿಪಿಯ ವಂದನಾ ಚವಾಣ್‌ ಹಾಗೂ ನಾಮನಿರ್ದೇಶಿತ ಸದಸ್ಯ ಕೆ ಟಿಎಸ್‌ ತುಳಸಿ ಹೆಸರು ಪ್ರಸ್ತಾಪ ಆಯಿತು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಟಿಎಂಸಿಯ ಸುಖೇಂದು ಶೇಖರ್‌ ರಾಯ್‌ ಅವರ ಹೆಸರು ಚಾಲ್ತಿಯಲ್ಲಿತ್ತು. ಆದರೆ ಈಗ ವಿಪಕ್ಷ ಪಾಳಯದಿಂದ ಹೊಸ ಹೆಸರುಗಳು ಮುನ್ನಲೆಗೆ ಬಂದಿವೆ. ಸಭೆಯಲ್ಲಿ ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಎಡಪಕ್ಷಗಳು, ಎನ್‌ಸಿಪಿ, ಆರ್‌ಜೆಡಿ,  ಟಿಡಿಪಿ ನಾಯಕರು ಭಾಗವಹಿಸಿದ್ದರು. 

ಆ.9ಕ್ಕೆ ಚುನಾವಣೆ: ಕಾಂಗ್ರೆಸ್‌ನ ಪಿ.ಜೆ.ಕುರಿಯನ್‌ ಅವರ ನಿವೃತ್ತಿಯಿಂದ ತೆರವಾಗಿರುವ ಉಪಸಭಾಪತಿ ಸ್ಥಾನಕ್ಕೆ ಆ.9ರಂದು ಪೂರ್ವಾಹ್ನ 11ಕ್ಕೆ ಚುನಾವಣೆ ನಡೆಯಲಿದೆ. ಆ.8ರ ಮಧ್ಯಾಹ್ನಕ್ಕಿಂತ ಮುನ್ನ ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಬೇಕಿದೆ ಎಂದು ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಪ್ರಕಟಿಸಿದರು. ಮೇಲ್ಮನೆಯ ಉಪಸಭಾಪತಿ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಯನ್ನು ಆಯ್ಕೆ ಮಾಡಿ ಎಂದು ನಾಯ್ಡು ಅವರು ಈ ಹಿಂದೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದರು. 

ಶಿವಸೇನೆ, ಬಿಜೆಡಿ, ಟಿಆರ್‌ಎಸ್‌ ನಿರ್ಣಾಯಕ
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಉಪಸಭಾಪತಿಯ ಗೆಲುವಿಗೆ 123 ಸಂಖ್ಯಾಬಲ ಬೇಕು. ಬಿಜೆಪಿ 73 ಸದಸ್ಯಬಲ ಹೊಂದಿದ್ದರೆ, ಮಿತ್ರಪಕ್ಷಗಳ ಬಲ 16 ಇದೆ. ಸರ್ಕಾರದಿಂದ ನಾಮನಿರ್ದೇಶನಗೊಂಡವರು 4 ಮಂದಿ ಇದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ 50 ಸ್ಥಾನ ಹೊಂದಿದೆ. ಟಿಎಂಸಿ ಹಾಗೂ ಎಸ್‌ಪಿ ತಲಾ 13, ಎಡಪಕ್ಷಗಳು 7, ಟಿಡಿಪಿ 6, ಆರ್‌ಜೆಡಿ 5, ಡಿಎಂಕೆ ಹಾಗೂ ಎನ್‌ಸಿಪಿ ತಲಾ 4 ಸ್ಥಾನಗಳನ್ನು ಹೊಂದಿವೆ. ಇಲ್ಲಿ ನಿರ್ಣಾಯಕ ಪಾತ್ರವಹಿಸುವವರು ಎಐಎಡಿಎಂಕೆಯ 13, ಬಿಜೆಡಿಯ 9, ಟಿಆರ್‌ಎಸ್‌ನ 6, ಶಿವಸೇನೆಯ 3, ವೈಎಸ್‌ಆರ್‌ನ 2 ಸದಸ್ಯರು. ಈ ಐದು ಪಕ್ಷಗಳು ಯಾರತ್ತ ಒಲವು ತೋರಿಸುತ್ತವೋ ಅವರ ಗೆಲುವು ಖಚಿತ. ನಿತೀಶ್‌ ಹಾಗೂ ವಿಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಾದೇಶಿಕ ಪಕ್ಷದ ಮಧ್ಯೆ ಸ್ವಂತ ವರ್ಚಸ್ಸಿನ ಮೂಲಕ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಯಾವ್ಯಾವ ಪಕ್ಷಗಳ ಒಲವು ಗಳಿಸಿಕೊಳ್ಳುತ್ತಾರೆ ಎಂಬುದೇ ಕುತೂಹಲ. ಈ ಪಕ್ಷಗಳ ನಿಲುವು 2019ರ ಲೋಕಸಭಾ ಚುನಾವಣೆಯ ರಾಜಕೀಯ ಧ್ರುವೀಕರಣದ ದಿಕ್ಸೂಚಿಯಾಗಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next