ನವಾಡ : ಮುಂಬರುವ ಲೋಕಸಭೆ ಚುನಾವಣೆಯ ಬಳಿಕ ನಿತೀಶ್ ಕುಮಾರ್ ಯಾವುದೇ ಕಾರಣಕ್ಕೂ ಪ್ರಧಾನಿಯಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಗುಡುಗಿದ್ದಾರೆ.
ಬಿಹಾರದ ನವಾಡದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ಅವರು, ಬಿಹಾರದ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಗಾಗಿ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದರು.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಾರೆ ಎಂದು ದೇಶದ ಜನರು ಈಗಾಗಲೇ ನಿರ್ಧರಿಸಿದ್ದಾರೆ.ಬಿಹಾರದ ಜನರು ಎಲ್ಲಾ 40 ಲೋಕಸಭಾ ಸ್ಥಾನಗಳಲ್ಲಿ ಮೋದಿಜಿಯವರ ಕಮಲ ಅರಳಲಿದೆ ಎಂದು ನಿರ್ಧರಿಸಿದ್ದಾರೆ ಎಂದರು.
ಇಂದು ಇಡೀ ಬಿಹಾರ ಚಿಂತಾಜನಕವಾಗಿದೆ.ಬಿಹಾರ ಷರೀಫ್ ಹೊತ್ತಿ ಉರಿಯುತ್ತಿದೆ, ಸಸಾರಂ ಹೊತ್ತಿ ಉರಿಯುತ್ತಿದೆ. 2024ರಲ್ಲಿ ಮೋದಿಜಿಗೆ ಪೂರ್ಣ ಬಹುಮತ ನೀಡಿ, 2025ರಲ್ಲಿ ಬಿಹಾರದಲ್ಲಿ ಬಿಜೆಪಿ ಸರಕಾರ ರಚಿಸಿ.ಈ ಗಲಭೆಕೋರರನ್ನು ತಲೆಕೆಳಗಾಗಿ ನೇತುಹಾಕಿ ನೇರಗೊಳಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದರು.
ಕಾಂಗ್ರೆಸ್, ಜೆಡಿಯು, ಆರ್ ಜೆಡಿ, ಟಿಎಂಸಿ… ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದವು. ಮೋದಿ ಜೀ ಒಂದು ಮುಂಜಾನೆ ಶ್ರೀರಾಮ ಮಂದಿರದ ಶಂಕುಸ್ಥಾಪನೆ ಮಾಡಿದರು ಮತ್ತು ಆಕಾಶಕ್ಕಿಂತ ಎತ್ತರದ ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದೆ ಎಂದರು.
2009 ರಿಂದ 2015 ರವರೆಗೆ ಕೇಂದ್ರ ಸರಕಾರವು ಬಿಹಾರಕ್ಕೆ ಕೇವಲ 50 ಸಾವಿರ ಕೋಟಿ ರೂಪಾಯಿಗಳನ್ನು ನೀಡಿತ್ತು ಮತ್ತು 2014 ರಿಂದ 2019 ರಲ್ಲಿ ಮೋದಿ ಜೀ ಬಿಹಾರಕ್ಕೆ 50 ಸಾವಿರ ಕೋಟಿಯಿಂದ 1 ಲಕ್ಷದ 9 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ ಎಂದರು.