ನವ ದೆಹಲಿ: ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಲ್ಲ, ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗಲು ಮಾತ್ರ ಅವರು ಬಯಸುತ್ತಾರೆ ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ (ಲಲನ್ ಸಿಂಗ್) ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಭಾರತವನ್ನು ಬಿಜೆಪಿಯಿಂದ ಮುಕ್ತಗೊಳಿಸಬಹುದು ಎಂದರು.
ನಿತೀಶ್ ಕುಮಾರ್ ಅವರು ಸಿಬಿಐ ಅಥವಾ ಇಡಿ ಎರಡಕ್ಕೂ ಹೆದರುವುದಿಲ್ಲ ಬಿಜೆಪಿ ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳುವ ರೀತಿ ಇಡೀ ದೇಶಕ್ಕೆ ಕಳವಳಕಾರಿಯಾಗಿದೆ, ಸ್ಥಾಪಿತ ಮತ್ತು ವಿಶ್ವಾಸಾರ್ಹ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕೊನೆಗೊಳಿಸುತ್ತಿದ್ದೀರಿ ಮತ್ತು ಅವುಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುತ್ತಿದ್ದೀರಿ ಎಂದು ಲಲನ್ ಸಿಂಗ್ ಕಿಡಿ ಕಾರಿದ್ದಾರೆ.
ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ಬಯಸಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆ ಕೈ ಜೋಡಿಸಲು ಬಿಜೆಪಿ ಬೆನ್ನಿಗೆ ಚೂರಿ ಇರಿದಿದ್ದಾರೆ” ಎಂದು ಕೇಂದ್ರ ಗ್ರಹ ಸಚಿವ ಅಮಿತ್ ಶಾ ಬಿಹಾರದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಲಲನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯ ತೊರೆದ ಬಳಿಕ ಹಲವು ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿ ಒಗ್ಗೂಡುವಿಕೆಯ ಕುರಿತಾಗಿ ಚರ್ಚೆ ನಡೆಸಿದ್ದರು.