ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದಿರುವ ಎನ್ ಡಿಎ ಇಂದು ಮಹತ್ವದ ಸಭೆ ನಡೆಸಿದ್ದು, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮತ್ತೆ ಅದೇ ಪದವಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯ್ನನಾಗಿ ಮುಂದುವರಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ನಿತೀಶ್ ಕುಮಾರ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್ ಡಿಎ 125 ಸ್ಥಾನಗಳನ್ನು, ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಸ್ಥಾನಗಳಲ್ಲಿ ಜಯಗಳಿಸಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಸೋಲು: ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರಿಂದ ಪ್ರತಿಭಟನೆ, ಭುಗಿಲೆದ್ದ ಹಿಂಸಾಚಾರ
ಎನ್ ಡಿಎ ಗೆದ್ದ 125 ಸ್ಥಾನಗಳಲ್ಲಿ ಜೆಡಿಯು 43 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಬಿಜೆಪಿ 74 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆದರೆ ಚುನಾವಣೆಗಿಂತ ಮೊದಲೇ ಮಾಡಿಕೊಂಡಿದ್ದ ಒಪ್ಪಂದಂತೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಗೆ ಬಿಟ್ಟುಕೊಡಲಾಗಿದೆ.
ಹೀಗಾಗಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಿಸಲಾಗಿದ್ದು, ನಿತೀಶ್ ಕುಮಾರ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.