Advertisement

ನಿತೀಶ್‌ ಸಂಪುಟ ವಿಸ್ತರಣೆ; ಬಿಜೆಪಿ, ಎಲ್ಜೆಪಿಗಿಲ್ಲ ಸ್ಥಾನ

01:46 AM Jun 03, 2019 | Team Udayavani |

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ನೂತನ ಸಂಪುಟದಲ್ಲಿ ತಮ್ಮ ನೇತೃತ್ವದ ಜೆಡಿಯುಗೆ ಕೇವಲ ಒಂದೇ ಒಂದು ಸ್ಥಾನ ಸಿಕ್ಕಿದ್ದರಿಂದ ಅಸಮಾಧಾನಗೊಂಡಿದ್ದ ಬಿಹಾರ ಸಿಎಂ ನಿತೀಶ್‌ ಕುಮಾರ್‌, ಭಾನುವಾರ ಬಿಹಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಸಂಪುಟಕ್ಕೆ ನಿತೀಶ್‌ ಅವರು ಬರೋಬ್ಬರಿ 8 ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದು, ಈ ಪೈಕಿ ಬಿಜೆಪಿಗೆ ಒಂದೇ ಒಂದು ಸ್ಥಾನವನ್ನೂ ನೀಡಿಲ್ಲ.

Advertisement

ಭಾನುವಾರ ಏಕಾಏಕಿ ಸಂಪುಟ ವಿಸ್ತರಣೆ ಕೈಗೊಂಡ ಸಿಎಂ ನಿತೀಶ್‌ ಕುಮಾರ್‌, 8 ಮಂದಿ ಜೆಡಿಯು ನಾಯಕರಿಗೆ ಸಚಿವ ಸ್ಥಾನಗಳನ್ನು ನೀಡಿದ್ದಾರೆ. ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಎಲ್ಜೆಪಿಯನ್ನು ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸಿಯೇ ಇಲ್ಲ. ಕೇಂದ್ರ ಸರ್ಕಾರವು ಜೆಡಿಯುಗೆ ಸೂಕ್ತ ಸ್ಥಾನಮಾನ ನೀಡದ್ದರಿಂದ ಬೇಸರಗೊಂಡಿದ್ದ ನಿತೀಶ್‌ ಈ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ಶುರುವಾಗಿದೆ. ಆದರೆ, ಮಿತ್ರಪಕ್ಷಗಳ ನಡುವೆ ಬಿರುಕು ಮೂಡಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಜೆಡಿಯು ಹಾಗೂ ಬಿಜೆಪಿ, ಅಂಥದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅವರೇ ಆಸಕ್ತಿ ತೋರಲಿಲ್ಲ: ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ನಿತೀಶ್‌ ಕುಮಾರ್‌, ‘ಸಂಪುಟದಲ್ಲಿ ಜೆಡಿಯು ಕೋಟಾದ ಸೀಟುಗಳು ಖಾಲಿ ಇದ್ದವು. ಅದಕ್ಕಾಗಿ ಅವುಗಳನ್ನು ಭರ್ತಿ ಮಾಡಲಾಯಿತು. ಬಿಜೆಪಿಗೂ ಒಂದು ಸ್ಥಾನದ ಆಫ‌ರ್‌ ನೀಡಿದ್ದೆವು. ಆದರೆ, ಅವರೇ ಅದರ ಬಗ್ಗೆ ಆಸಕ್ತಿ ತೋರಲಿಲ್ಲ’ ಎಂದು ಹೇಳಿದ್ದಾರೆ. ಇವರ ಮಾತುಗಳನ್ನೇ ಪುನರುಚ್ಚರಿಸಿರುವ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್‌ ಮೋದಿ, ‘ಬಿಜೆಪಿಯ ಒಂದು ಸಚಿವ ಸ್ಥಾನ ಖಾಲಿಯಿದ್ದು, ಅದನ್ನು ಭರ್ತಿ ಮಾಡುವಂತೆ ನಿತೀಶ್‌ ಕೋರಿದ್ದರು. ಆದರೆ, ಭವಿಷ್ಯದಲ್ಲಿ ಅದನ್ನು ಭರ್ತಿ ಮಾಡಿದರಾಯ್ತು ಎಂದು ಸುಮ್ಮನಾಗಿದ್ದೇವೆ. ಎರಡೂ ಪಕ್ಷಗಳ ನಡುವೆ ಯಾವುದೇ ಬಿರುಕು ಇಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next