ಪುಣೆ: ಮುಂದಿನ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿನ ಕಾರು ಉತ್ಪಾದಕ ಕಂಪೆನಿಗಳು ಪರ್ಯಾಯ ಇಂಧನ (ಫ್ಲೆಕ್ಸಿ ಫ್ಯೂಯೆಲ್ ಎಂಜಿನ್) ಎಂಜಿನ್ ಅನ್ನು ಪರಿಚಯಿಸಬೇಕಾದ್ದು ಕಡ್ಡಾಯ ಎಂದು ಆದೇಶ ಹೊರಡಿಸಲಾಗುತ್ತದೆ. ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬಿಎಂಡಬ್ಲ್ಯು, ಮರ್ಸಿಡಿಸ್, ಟಾಟಾ, ಮಹೀಂದ್ರಾ ಸೇರಿದಂತೆ ಎಲ್ಲಾ ವಾಹನ ಉತ್ಪಾದಕ ಕಂಪೆನಿಗಳು ಸ್ಥಳೀಯವಾಗಿ ಉತ್ಪಾದಿಸಲಾದ ಇಥೆನಾಲ್‌ನಿಂದ ಕಾರ್ಯನಿರ್ವಹಿಸು ವಂತಾಗಬೇಕು. ದೇಶದ ರಸ್ತೆಗಳಲ್ಲಿ ಪೆಟ್ರೋಲ್, ಡೀಸೆಲ್‌ನಿಂದ ಓಡುವ ವಾಹನಗಳ ಸಂಖ್ಯೆ ಕಡಿಮೆಯಾಗುವುದನ್ನು ನನ್ನ ಜೀವಿತಾವಧಿಯಲ್ಲಿಯೇ ನೋಡಬೇಕೆಂಬ ಬಯಕೆ ನನ್ನದು ಎಂದೂ ಗಡ್ಕರಿ ಹೇಳಿದ್ದಾರೆ.
ಪುಣೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕದ ಕೇಂದ್ರ ಸಚಿವರು ಈ ಮಾತುಗಳನ್ನಾಡಿದ್ದಾರೆ. ಬಜಾಜ್ ಮತ್ತು ಟಿವಿಎಸ್ ಕಂಪೆನಿಗಳಿಗೆ ಕೂಡ ಅವುಗಳು ಉತ್ಪಾದಿಸುವ ದ್ವಿಚಕ್ರ ವಾಹನಗಳಲ್ಲಿಯೂ ಇಂಧನ ಆಯ್ಕೆ ಎಂಜಿನ್ ಇರುವಂತೆ ವಾಹನ ವಿನ್ಯಾಸ ಇರಲಿ ಎಂದು ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ. ಫ್ಲೆಕ್ಸ್ ಇಂಧನ ಎಂದರೆ, ಗ್ಯಾಸೋಲಿನ್ ಮತ್ತು ಇಥೆನಾಲ್ (ಅಥವಾ ಮಿಥೆನಾಲ್) ಸಮ್ಮಿಶ್ರಣವುಳ್ಳ ಪರ್ಯಾಯ ಇಂಧನವಾಗಿದೆ.
ಕಟೌಟ್ ಹಾಕುವವರಿಗೆ ಲೇವಡಿ:
ಹುಟ್ಟಿದ ಹಬ್ಬಕ್ಕೆ ಸಾರ್ವಜನಿಕವಾಗಿ ಕಟೌಟ್ ಹಾಕುವ ರಾಜಕೀಯ ಮುಖಂಡರನ್ನು ಸಚಿವ ಗಡ್ಕರಿ ಲೇವಡಿ ಮಾಡಿದ್ದಾರೆ. ದಿಢೀರ್ ಜನಪ್ರಿಯರಾಗುವ ನಿಟ್ಟಿನಲ್ಲಿ ರಾಜಕೀಯ ಮುಖಂಡರು ಇಂಥ ಅಡ್ಡದಾರಿಗಳನ್ನು ಹಿಡಿಯುವುದರಿಂದ ಯಾವುದೇ ಪ್ರಯೋಜನವಾಗಲಾರದು ಎಂದಿದ್ದಾರೆ. ಜನ್ಮದಿನ ಸೇರಿದಂತೆ ಹಲವು ಸಂದರ್ಭಗಳಲ್ಲಿ ರಾಜಕಾರಣಿಗಳು ದುಂದುವೆಚ್ಚ ಮಾಡಿ ಕಟೌಟ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡಿಸ್, ಅಟಲ್ ಬಿಹಾರಿ ವಾಜಪೇಯಿ ಯಾವತ್ತಾದರೂ ಕಟೌಟ್‌ಗಳನ್ನು ಹಾಕಿಸಿಕೊಂಡಿದ್ದು ನೋಡಿದ್ದೀರಾ? ಪ್ರಾಮಾಣಿಕರು ಮತ್ತು ತಮ್ಮ ನಂಬಿಕೆಯೊಂದಿಗೆ ರಾಜಿ ಮಾಡಿಕೊಳ್ಳದವರನ್ನು ಜನರೇ ಗುರುತಿಸುತ್ತಾರೆ. ಪಕ್ಷಾಂತರ ಮಾಡುತ್ತಾ ಸಚಿವ ಸ್ಥಾನ, ಸಿಎಂ ಸ್ಥಾನ ಪಡೆಯುವವರು ದೀರ್ಘಕಾಲ ಜನಮಾನಸದಲ್ಲಿ ಉಳಿಯುವುದಿಲ್ಲ ಎಂದೂ ಗಡ್ಕರಿ ಹೇಳಿದ್ದಾರೆ.