Advertisement

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

02:12 AM Jul 27, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 9ನೇ ಆಡಳಿತ ಸಮಿತಿ ಸಭೆ ಶನಿವಾರ ನಡೆಯಲಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಅಜೆಂಡಾ ಸಭೆ ಹೊಂದಿದೆ.

Advertisement

ನೀತಿ ಆಯೋಗದ ಹೇಳಿಕೆಯ ಪ್ರಕಾರ, ಸಭೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಹಭಾಗಿ ಆಡಳಿತ ಮತ್ತು ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಶಿಫಾರಸುಗಳನ್ನು ಸಭೆಯಲ್ಲಿ ಚರ್ಚೆಗೆ ಪರಿಗಣಿಸಲಾಗುತ್ತಿದೆ. ಕುಡಿಯುವ ನೀರು, ವಿದ್ಯುತ್‌, ಆರೋಗ್ಯ, ಶಿಕ್ಷಣ ಮತ್ತು ಆಸ್ತಿ… ಹೀಗೆ ಐದು ವಿಷಯಗಳ ಮೇಲೂ ಗುಣಾತ್ಮಕ ಶಿಫಾರಸುಗಳನ್ನು ಸಮ್ಮೇಳನದಲ್ಲಿ ನೀಡಲಾಗಿತ್ತು. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬಲಿದೆ. ದೇಶ ಆರ್ಥಿಕತೆಯನ್ನು 2,511 ಲಕ್ಷ ಕೋಟಿ ರೂ.ಗೆ(30 ಲಕ್ಷ ಕೋಟಿ ಡಾಲರ್‌) ಹೆಚ್ಚಿಸುವ ದೂರದರ್ಶಿ ಪತ್ರವನ್ನು ತಯಾರಿಸಲಾಗುತ್ತಿದೆ. ಈ ದೂರದರ್ಶಿ ಪತ್ರದ ಬಗ್ಗೆಯೂ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಲಿದೆ. ಆರ್ಥಿಕಾಭಿವೃದ್ಧಿ, ಸಾಮಾಜಿಕ ಪ್ರಗತಿ ಮತ್ತು ಉತ್ತಮ ಆಡಳಿತ ಸೇರಿದಂತೆ ಒಟ್ಟು 10 ವಲಯವಾರು ವಿಷಯಾಧರಿತ ದೃಷ್ಟಿಕೋನಗಳನ್ನು ಈ ಅಜೆಂಡಾ ಹೊಂದಿದೆ ಎಂದು ನೀತಿ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇಂದಿನ ಸಭೆಗೆ 7 ರಾಜ್ಯಗಳಿಂದ ಬಹಿಷ್ಕಾರ!
ಬಜೆಟ್‌ ತಾರತಮ್ಯ ವಿರೋಧಿಸಿ ಕಾಂಗ್ರೆಸ್‌ ಆಡ ಳಿತದ ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ತಮಿ ಳುನಾಡು, ಕೇರಳ, ಪಂಜಾಬ್‌, ದಿಲ್ಲಿ ಮುಖ್ಯ ಮಂತ್ರಿಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದಾರೆ. ರಾಜ್ಯದ ಹಿತಾಸಕ್ತಿ ಗಮನದಲ್ಲಿ ಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಝಾರ್ಖಂಡ್‌ನ‌ ಆಡಳಿತಾರೂಢ ಜೆಎಂಎಂ ಸಂಸದೆ ಮಹುವಾ ಮಾಜಿ ತಿಳಿಸಿದ್ದಾರೆ. ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದು, “ನಾನು ಸಭೆಗೆ ಹಾಜರಾಗಿ ವಿಪಕ್ಷಗಳ ಸರಕಾರವಿರುವ ರಾಜ್ಯಗಳಿಗೆ ಆಗಿರುವ ಅನ್ಯಾಯ, ಬಜೆಟ್‌ ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತೇನೆ ಮತ್ತು ಪ್ರತಿಭಟಿಸುತ್ತೇನೆ’ ಎಂದಿದ್ದಾರೆ.

ನೀತಿ ಆಯೋಗವನ್ನು ಕಿತ್ತೆಸೆಯಿರಿ
ನೀತಿ ಆಯೋಗದಿಂದ ಯಾವ ಕೆಲಸವೂ ಆಗಿಲ್ಲ, ಏಕೆಂದರೆ ಅದಕ್ಕೆ ಯಾವ ಅಧಿಕಾರವನ್ನೂ ನೀಡಲಾಗಿಲ್ಲ. ಹೀಗಾಗಿ ಕೂಡಲೇ ನೀತಿ ಆಯೋಗವನ್ನು ಕಿತ್ತೆಸೆಯಬೇಕು.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next