ಪ್ಯಾರಿಸ್: 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜುಲೈ 26ರಂದು ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ನಲ್ಲಿ ವರ್ಣರಂಜಿತ ಚಾಲನೆ ದೊರಕಲಿದೆ. ಏತನ್ಮಧ್ಯೆ ಒಲಿಂಪಿಕ್ಸ್ ಉದ್ಘಾಟನೆಗೂ ಮುನ್ನ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ರಿಲಯನ್ಸ್ ಫೌಂಡೇಶನ್ ನ ಸಂಸ್ಥಾಪಕಿ ನೀತಾ ಅಂಬಾನಿ ಅವರನ್ನು ಒಲಿಂಪಿಕ್ಸ್ ಸಮಿತಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಇಲ್ಲಿ ನಡೆದ 142ನೇ ಸೆಷನ್ ನಲ್ಲಿ ನೀತಾ ಅಂಬಾನಿ ಶೇ.100ರಷ್ಟು ಮತ ಪಡೆದುಕೊಳ್ಳುವುದರೊಂದಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಐಒಸಿ ಸದಸ್ಯೆಯಾಗಿ ನನ್ನ ಮರು ಆಯ್ಕೆ ಮಾಡಿರುವುದು ನನಗೆ ದೊರೆತ ದೊಡ್ಡ ಗೌರವವಾಗಿದೆ. ನನ್ನ ಮೇಲೆ ಇಟ್ಟ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಐಒಸಿ ಅಧ್ಯಕ್ಷರಿಗೆ (ಥಾಮಸ್) ಮತ್ತು ಎಲ್ಲಾ ನನ್ನ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೀತಾ ಅಂಬಾನಿ ತಿಳಿಸಿದ್ದಾರೆ.
ಈ ಮರು ಆಯ್ಕೆ ಕೇವಲ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲ, ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವದ ಮನ್ನಣೆಯಾಗಿದೆ. ನಾನು ಈ ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಪ್ರತಿಯೊಬ್ಬ ಭಾರತೀಯರೊಂದಿಗೆ ಹಂಚಿಕೊಳ್ಳುತ್ತೇನೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಒಲಿಂಪಿಕ್ ಆಂದೋಲನವನ್ನು ಬಲಪಡಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ ಎಂದು ನೀತಾ ಅಂಬಾನಿ ಸಂತಸ ಹಂಚಿಕೊಂಡಿದ್ದಾರೆ.
ನೀತಾ ಅಂಬಾನಿ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ 2016ರಲ್ಲಿ ಮೊದಲ ಬಾರಿಗೆ ನೇಮಕ ಮಾಡಲಾಗಿತ್ತು. ಐಒಸಿ ಮಂಡಳಿಗೆ ಸೇರಿದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೀತಾ ಅಂಬಾನಿ ಅವರ ನೇತೃತ್ವದಲ್ಲಿ ಐಒಸಿ ವಾರ್ಷಿಕ ಸಭೆಯ ಆತಿಥ್ಯವನ್ನು ಭಾರತ ಪಡೆದುಕೊಂಡಿತ್ತು.