ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಿಶಾಚರ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ “ನಿಶಾಚರ’ ಸಿನಿಮಾದ ಟ್ರೇಲರ್ ಮತ್ತು ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು.
ಯುವ ಪ್ರತಿಭೆಗಳಾದ ಅಕ್ಷಯ್, ಮಧು, ಅಭಿಮನ್ಯು ಮತ್ತಿತರರು “ನಿಶಾಚರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ವರ್ಷದಿಂದ ಸಿನಿಮಾ ರಂಗದಲ್ಲಿ ಚಿತ್ರಕಥೆ ಮತ್ತು ಬರವಣಿಗೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಅಂಧ ಪ್ರತಿಭೆ ಎಸ್. ಭಾಸ್ಕರ್ ಜೀ ಈ “ನಿಶಾಚರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಪ್ರಿಯಶ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಲತಾ ಬಿ. ಆರ್, ಜನಾರ್ಧನ್ ನಿರ್ಮಿಸಿರುವ ಈ ಚಿತ್ರಕ್ಕೆ ಬೃಂದಾ, ನೇತ್ರಾವತಿ ಸಹ ನಿರ್ಮಾಪಕರಾಗಿದ್ದಾರೆ.
“ನಿಶಾಚರ’ ಸಿನಿಮಾದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಎಸ್. ಭಾಸ್ಕರ್ ಜೀ, “ಇದೊಂದು ಅಡ್ವೆಂಚರ್-ಥ್ರಿಲ್ಲರ್ ಶೈಲಿಯ ಸಿನಿಮಾ. ಸುಮಾರು 26 ದಿನಗಳ ಕಾಲ ಕಾರ್ಕಳ, ಉಡುಪಿ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಪ್ರೀತಿ ತಪ್ಪಾ? ಅಥವಾ ಪ್ರೀತ್ಸೋದ್ ತಪ್ಪಾ? ಎಂಬ ಅಂಶದ ಜೊತೆಗೆ ತಂದೆ-ತಾಯಿಗೆ ಸುಳ್ಳು ಹೇಳಿ ಮಕ್ಕಳು ಬೇರೆ ಸ್ಥಳಕ್ಕೆ ಹೋದರೆ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಇನ್ನೊಂದು ವಿಶೇಷವೆಂದರೆ, ಇಡೀ ಸಿನಿಮಾದ ಬಹುತೇಕ ಕಥೆ ಸಮುದ್ರದ ಮಧ್ಯದಲ್ಲಿ ಕೆಟ್ಟು ನಿಂತಿರುವ ಹಡಗಿನಲ್ಲಿ ನಡೆಯುತ್ತದೆ. “ನಿಶಾಚರ’ ಅಂದ್ರೆ ರಾತ್ರಿ ಸಂಚಾರಿ ಅಥವಾ ಕತ್ತಲೆಯಲ್ಲಿ ಸಕ್ರಿಯವಾಗಿರುವುದು ಎಂದು ಅರ್ಥ ಬರುತ್ತದೆ. ಸಿನಿಮಾ ನೋಡಿದ ನಂತರ ಅದು ಹೇಗೆ ಕಥೆಗೆ ಕನೆಕ್ಟ್ ಆಗುತ್ತದೆ ಅನ್ನೋದು ಗೊತ್ತಾಗುತ್ತದೆ’ ಎಂದು ಕಥೆಯ ಎಳೆ ಬಿಚ್ಚಿಟ್ಟರು.
ಅಂಧನಾದರೂ, ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಮಾಡಿರುವುದರ ಬಗ್ಗೆ ಮಾತನಾಡಿದ ಭಾಸ್ಕರ್ ಜೀ, “ಸುಮಾರು 15 ವರ್ಷದಿಂದ ಕಣ್ಣು ಕಾಣುತ್ತಿಲ್ಲ. ಆದರೂ, ಈಗಾಗಲೇ ಕನ್ನಡದಲ್ಲಿ “ಮುನಿಯಾ’, “ಗೊಂಬೆಯಾಟ’ ಸೇರಿ ಸಾಕಷ್ಟು ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ಅನುಭವವಿದೆ. ಆ ಅನುಭವದ ಆಧಾರದಲ್ಲಿ ಈ ಸಿನಿಮಾ ನಿರ್ದೇಶಿಸಿದ್ದೇನೆ. ನಿರ್ದೇಶನ ಮಾಡುವುದು ಕಷ್ಟವಾದ್ರೂ ಇಷ್ಟ ಪಟ್ಟು ಚಾಲೆಂಜ್ ಆಗಿ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ. ನನ್ನ ಈ ಕನಸಿಗೆ ಇಡೀ ಚಿತ್ರತಂಡ ಸಂಪೂರ್ಣ ಬೆನ್ನೆಲುಬಾಗಿ ನಿಂತು ಸಹಕರಿಸಿತು. ಕನ್ನಡದ ಸಿನಿಪ್ರಿಯರಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ’ ಎಂಬ ಭರವಸೆ ವ್ಯಕ್ತಪಡಿಸಿದರು.
“ನಿಶಾಚರ’ ಚಿತ್ರಕ್ಕೆ ವಿ. ಮಂಜುನಾಥ್ ಪಾಟೀಲ್ ಛಾಯಾಗ್ರಹಣ, ಮನು ಅಡಗೂರು ಸಂಕಲನವಿದೆ. ಚಿತ್ರದ ಹಾಡುಗಳಿಗೆ “ಮಜಾ ಟಾಕೀಸ್’ ಮೋಹನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಕಲಾವಿದರು, ತಂತ್ರಜ್ಞರು ಸಿನಿಮಾದ ಅನುಭವ ಹಂಚಿಕೊಂಡರು. ಇದೇ ಆಗಸ್ಟ್ ವೇಳೆಗೆ “ನಿಶಾಚರ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.