Advertisement
6ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ರಮೇಶ್‌ಗೆ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇತ್ತು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಅವರು, ಪ್ರತಿದಿನ ಸಿದ್ಧಗಂಗಾ ಮಠದಲ್ಲಿ ಊಟ ಮಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದರು. ಬಡತನ ಹೆಚ್ಚಾದ್ದರಿಂದ 7ನೇ ತರಗತಿಗೆ ಶಾಲೆ ಬಿಟ್ಟರು. ತಾಯಿಗೆ ಶಾಲೆಗೆ ಹೋಗುವುದಾಗಿ ಹೇಳಿ ತುಮಕೂರಿನ ಚಿಕ್ಕಪೇಟೆಯಲ್ಲಿದ್ದ ನಂಜುಂಡೇಶ್ವರ ಬೇಕರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ನಂತರ ಮನೆಯವರಿಗೆ ಗೊತ್ತಾಗಿ ಶಾಲೆ ಬಿಡಿಸಿ ಎಲ್ಲಿಯಾದ್ರೂ ಕೆಲಸಕ್ಕೆ ಸೇರಿಕೋ ಎಂದು ಹೇಳಿದರು. ನಂತರ ಟೌನ್‌ಹಾಲ್‌ನಲ್ಲೇ ಇದ್ದ ಸುಧಾ ಟೀ ಹೌಸ್‌ನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ ರಮೇಶ್, ಬೆಂಗಳೂರಿಗೆ ಬಂದು ಸುಧಾಮನಗರದಲ್ಲಿನ ಜನತಾ ಹೋಟೆಲ್‌ನಲ್ಲಿ ಸಪ್ಲೆ„ಯರ್ ಆಗಿ ಸೇರಿಕೊಂಡರು. ನಂತರ 1994ರವರೆಗೂ ಮಾಗಡಿ ರೋಡ್‌ನಲ್ಲಿರುವ ಎಸ್‌ಎಲ್‌ವಿ ಬೇಕರಿಯಲ್ಲಿ ಕೆಲಸ ಮಾಡಿ ನಂತರ ಮುಂಬೈಗೆ ಹೋದರು. ಅಲ್ಲಿ 1999ರವರೆಗೂ ಕೆಲಸ ಮಾಡಿ, ನಂತರ ತುಮಕೂರಿಗೆ ವಾಪಸ್ಸಾಗಿ, ಮನೆಯಲ್ಲಿ ಅಡುಗೆ ಮಾಡಿಕೊಂಡು ಅದನ್ನು ಸೈಕಲ್‌ನಲ್ಲಿ ತಂದು ಎಂ.ಜಿ.ರಸ್ತೆಯ ಎಲ್‌ಐಸಿ ಕಚೇರಿ ಮುಂದೆ ಮಾರಾಟ ಮಾಡುತ್ತಿದ್ದರು. ಇವರಿಗೆ ಪತ್ನಿ ಉಷಾ ಸಾಥ್ ನೀಡುತ್ತಿದ್ದರು. ನಂತರ ಎಲ್‌ಐಸಿ ಕಚೇರಿ ಮುಂಭಾಗವೇ ಒಂದು ಸಣ್ಣ ಹೋಟೆಲ್ ಪ್ರಾರಂಭಿಸಿ ಅಲ್ಲಿ ಬಂದ ಆದಾಯದಲ್ಲಿ ಕುಣಿಗಲ್ ರಸ್ತೆಯ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಮಗಳು “ನಿಸರ್ಗ’ಳ ಹೆಸರಲ್ಲೇ “ನಿಸರ್ಗ ಮಲ್ಲಿಗೆ ಇಡ್ಲಿ ಹೋಟೆಲ್’ ಅನ್ನು ಪ್ರಾರಂಭಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದ ಕಾರಣ, ಮಕ್ಕಳು ತನ್ನಂತೆ ಅರ್ಧಕ್ಕೆ ಓದು ನಿಲ್ಲಿಸಬಾರದು, ಹಸಿವಿನಿಂದ ನರಳಬಾರದು ಎಂದು ಯೋಚಿಸಿ 10 ರೂ.ಗೆ ತಿಂಡಿ, 20 ರೂ.ಗೆ ಊಟ ನೀಡುತ್ತಿದ್ದಾರೆ. 8 ವರ್ಷಗಳ ಹಿಂದೆ ಭೀಮಸಂದ್ರದಲ್ಲೂ ಒಂದು ಹೋಟೆಲ್ ಅನ್ನು ಪ್ರಾರಂಭಿಸಿದ್ದು, ಅಲ್ಲಿಯೂ ಇದೇ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದಾರೆ.
ಮಲ್ಲಿಗೆ ತಟ್ಟೆ ಇಡ್ಲಿ, ಟೊಮೆಟೋ ಬಾತ್ ಈ ಹೋಟೆಲ್ ವಿಶೇಷ ತಿಂಡಿ. ಬೆಳ್ಳಗೆ ಸಾಫ್ಟ್ಆಗಿರುವ ಮಲ್ಲಿಗೆ ತಟ್ಟೆ ಇಡ್ಲಿಗೆ ಶೇಂಗಾ ಚಟ್ನಿ, ಸಾಗು ರುಚಿಕಟ್ಟಾಗಿರುತ್ತದೆ. ಇತರೆ ತಿಂಡಿಗಳು:
ಇಡ್ಲಿ, ಪೂರಿ, ಟೊಮೆಟೋ ಬಾತ್, ಪುಳಿಯೋಗರೆ, ವಡೆ, ದೋಸೆ, ಚಿತ್ರಾನ್ನ, ಮೊಸರನ್ನ, ಉಪ್ಪಿಟ್ಟು, ಕೇಸರಿಬಾತ್ ಇತರೆ ಹೋಟೆಲ್‌ನಲ್ಲಿ ಸಿಗುವ ಎಲ್ಲಾ ತಿಂಡಿಗಳು ಇಲ್ಲಿ ಸಿಗುತ್ತದೆ. ಆದರೆ, ಯಾವುದೇ ತಿಂಡಿ ತೆಗೆದುಕೊಂಡ್ರೂ 10 ರೂ. ಮಾತ್ರ.
Related Articles
ಚಪಾತಿ, ಅನ್ನ, ಪಲ್ಯ, ಸಾಂಬಾರ್, ಹಪ್ಪಳ, ಉಪ್ಪಿನಕಾಯಿ, ರಸಂ, ಮಜ್ಜಿಗೆ. ಚಪಾತಿ ಬೇಡ ಅಂದ್ರೆ ಪರೋಟ, ಮುದ್ದೆ ಬೇಕಾದ್ರೂ ತೆಗೆದುಕೊಳ್ಳಬಹುದು.
Advertisement
ಒಂದು ಕಾಲದಲ್ಲಿ ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದ ರಮೇಶ್ ಅವರು ಈಗ 20 ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಇಷ್ಟು ಕಮ್ಮಿ ದರದಲ್ಲಿ ಊಟ ತಿಂಡಿ ಕೊಡುತ್ತಿರುವುದರ ಬಗ್ಗೆ ಕೇಳಿದ್ರೆ, ಹಸಿವಿನಿಂದ ನಾನೂ ನರಳಿದ್ದೇನೆ. ಅದು ಬೇರೆಯವರಿಗೆ ಬರಬಾರದು, ಹೆಚ್ಚು ಆಸ್ತಿ ಮಾಡಬೇಕೆಂಬ ಆಸೆ ಇಲ್ಲ. ನಮ್ಮ ಹೋಟೆಲ್‌ನಲ್ಲಿ ತಿಂಡಿ ತಿಂದವರು ಒಂದೊಳ್ಳೆ ಮಾತನಾಡಿದ್ರೆ ಸಾಕು: ನಮಗೆ ಅದೇ ಸಂತೋಷ. ಹಿಂದೆ ಸೈಕಲ್‌ನಲ್ಲಿ ತಿಂಡಿ ಮಾರುತ್ತಿದ್ದಾಗ 5 ರೂ.ಗೆ ತಿಂಡಿ ತಿಂದಿದ್ದ ಕಾನೂನು ಕಾಲೇಜು ವಿದ್ಯಾರ್ಥಿಯೊಬ್ಬರು, ಈಗ ಬಳ್ಳಾರಿ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿದ್ದಾರೆ. ಒಮ್ಮೆ ರಸ್ತೆಯಲ್ಲಿ ಹೋಗಬೇಕಾದ್ರೆ ಕಾರು ನಿಲ್ಲಿಸಿ ಮಾತನಾಡಿಸಿ ನಮ್ಮ ಹೋಟೆಲ್‌ನಲ್ಲಿ 5 ರೂ.ಗೆ ತಿಂಡಿ ತಿಂದಿದ್ದನ್ನು ನೆನಪು ಮಾಡಿದ್ರು. ಇದು ನಮಗೆ ಬಹಳ ಖುಷಿ ಕೊಟ್ಟಿತು ಎನ್ನುತ್ತಾರೆ.
ಹೋಟೆಲ್ ಸಮಯ:ಬೆಳಗ್ಗೆ 7.30ರಿಂದ ಸಂಜೆ 4ರವರೆಗೆ, ಭಾನುವಾರ ಬೆಳಗ್ಗೆ 11.30ರವರೆಗೆ ಮಾತ್ರ. ಹೋಟೆಲ್ ವಿಳಾಸ:
ಕುಣಿಗಲ್ ರೋಡ್, ಪಾಲಿಟೆಕ್ನಿಕ್ ಕಾಲೇಜು ಮುಂಭಾಗ. ತುಮಕೂರು.
ಮತ್ತೂಂದು ಹೋಟೆಲ್ ಬಿ.ಎಚ್.ರಸ್ತೆ, ಭೀಮಸಂದ್ರ, ಗಣಪತಿ ಚೌಲಿó ಪಕ್ಕ ತುಮಕೂರು. – ಭೋಗೇಶ ಆರ್.ಮೇಲುಕುಂಟೆ/ಜಗದೀಶ್ ಗುಂಡಪ್ಪಚಿಕ್ಕೇನಹಳ್ಳ
ಫೋಟೋ ಕೃಪೆ:
– ದೊಡ್ಡಗುಳ ಗಂಗಾಧರ.