ವಾಡಿ (ಚಿತ್ತಾಪುರ): ಸಮೀಪದ ಹಳಕರ್ಟಿ ಸಿದ್ದೇಶ್ವರ ಧ್ಯಾನಧಾಮದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿ ಅವರು ತಮ್ಮ ಸಂಕಲ್ಪದಂತೆ ಶನಿವಾರ ಒಂಬತ್ತು ದಿನಗಳ ಜೀವ ನಿರ್ವಿಕಲ್ಪ ಸಮಾಧಿಯಾದರು.
ಶನಿವಾರ ಸಂಜೆ ಧ್ಯಾನಧಾಮದಲ್ಲಿ ಸೇರಿದ್ದ ವಿವಿಧ ಗ್ರಾಮಗಳ ನೂರಾರು ಜನ ಭಕ್ತರು, ಪೂಜ್ಯರ ಧ್ಯಾನ ಮತ್ತು ತಪ್ಪಿಸಿನಲ್ಲಿ ಭಾಗಿಯಾಗುವ ಮೂಲಕ ಭಜನೆ ಹಾಗೂ ಪ್ರವಚನಗಳ ಆಯೋಜನೆ ಮಾಡಿ ಭಕ್ತಿ ಮೆರೆದರು. ಆ.11 ರಿಂದ ಒಂಬತ್ತು ದಿನಗಳ ಕಾಲ ಮೌನಾನುಷ್ಟಾನಕ್ಕೆ ಮುಂದಾದ ಶ್ರೀರಾಜಶೇಖರ ಸ್ವಾಮೀಜಿಯವರು ಪ್ರತಿದಿನ ಸಂಜೆ ಒಂದು ಲೋಟ ಹಾಲು ಮತ್ತು ಜಲಪಾನವನ್ನು ಮಾತ್ರ ಸ್ವೀಕರಿಸಿದ್ದರು. ಆ.20 ರಂದು ನಿರ್ವಿಕಲ್ಪ ಸಮಾಧಿಗೆ ಮುಂದಾದರು. ಆ.28ರ ವರೆಗೆ ಈ ಸಮಾಧಿ ಯೋಗ ನಡೆಯಲಿದ್ದು, ಪೂಜ್ಯರು ಸಮಾದಿಯೊಳಗೆ ಕುಳಿತು ದೇವಿ ಪಾರಾಯಣ ಅಧ್ಯಯನ ಮಾಡುವರು ಎಂದು ಮಠದ ಭಕ್ತರು ಪ್ರಕಟಿಸಿದರು.
ಇದಕ್ಕೂ ಮೊದಲು ಪೂಜ್ಯ ರಾಜಶೇಖರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಯಡ್ರಾಮಿ ತಾಲೂಕಿನ ಆಲೂರು ಸಂಸ್ಥಾನ ಮಠದ ಶ್ರೀಕೆಂಚವೃಷಭೇಂದ್ರ ಶಿವಾಚಾರ್ಯರು, ಸ್ವಾಮೀಜಿಯವರು ಭಕ್ತರ ಒಳಿತಿಗಾಗಿ ಪ್ರಾರ್ಥಿಸಲು ಕಠಿಣ ತಪಸ್ಸಿಗೆ ಮುಂದಾಗಿದ್ದಾರೆ. ಜೀವ ನಿರ್ವಿಕಲ್ಪ ಸಮಾಧಿ ಯೋಗ ಅಷ್ಟು ಸುಲಭದ್ದಲ್ಲ. ಹಾಗಂತ ಪೂಜ್ಯರ ಪ್ರಾಣಕ್ಕೆ ಅಪಾಯವಿಲ್ಲ. ಒಂಬತ್ತು ದಿನಗಳ ನಿರ್ವಿಕಲ್ಪ ಸಮಾಧಿ ಯೋಗ ಧ್ಯಾನ ಸಾಧಕರಿಗೆ ಸಹಜವಾದ ತಪ್ಪಸ್ಸಾಗಿದೆ. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಬಾರದು. ಒಂಬತ್ತು ದಿನಗಳ ನಂತರ ಗೋಡೆ ಒಡೆದ ಬಳಿಕ ಪೂಜ್ಯರು ಹೊರ ಬರುತ್ತಾರೆ. ಅಲ್ಲಿಯ ವರೆಗೂ ಭಕ್ತರು ಪ್ರತಿದಿನ ಭಜನೆ ಹಾಗೂ ಅನ್ನದಾಸೋಹ ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ ಆಲೂರು ಸ್ವಾಮೀಜಿ, ಪೂಜ್ಯರು ಕುಳಿತ ಧ್ಯಾನದ ಕೋಣೆಯ ಬಾಗಿಲನ್ನು ಕಾಂಕ್ರೀಟ್ ಹಾಗೂ ಇಟ್ಟಿಗೆಗಳಿಂದ ಮುಚ್ಚಿದ ನಂತರ ಹೂಮಾಲೆ ಅರ್ಪಿಸಿ ಕರ್ಪೂರ ಬೆಳಗಿದರು.
ಅಳ್ಳೊಳ್ಳಿಯ ಗದ್ದುಗೆ ಮಠದ ಶ್ರೀನಾಗಪ್ಪಯ್ಯ ಸ್ವಾಮೀಜಿ, ಯರಗೋಳದ ಸಂಗನಬಸವ ಸ್ವಾಮೀಜಿ, ಬೆನಕನಹಳ್ಳಿಯ ವಿರಕ್ತ ಮಠದ ಶ್ರೀಕೇದಾರಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಬಸವರಾಜ ಸಜ್ಜನ್, ರಾಘವೇಂದ್ರ ಅಲ್ಲಿಪುರ, ಮಣಿಕಂಠ ರಾಠೋಡ, ರವಿ ನಾಯಕ, ಡಾಕು ರಾಠೋಡ, ವೀರಣ್ಣ ಯಾರಿ, ಭೀಮರಾಯ ನಾಯ್ಕೋಡಿ, ಬಸವರಾಜ ಲೋಕನಳ್ಳಿ, ಶ್ರೀನಾಥ ಇರಗೊಂಡ, ಚಂದ್ರಶೇಖರ ಮೇಲಿನಮನಿ, ವೀರೇಶ ಜೀವಣಗಿ, ನಿಂಗಣ್ಣ ಮಾಸ್ತಾರ, ವೀರೇಶ ಕಪ್ಪಾರ, ಸಿದ್ದು ಬಾವಿಕಟ್ಟಿ ಸೇರಿದಂತೆ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.