ಶುದ್ಧ ನೀರು ಸಿಗುವುದು ಇಂದು ಬಹುದೊಡ್ಡ ಚಾಲೆಂಜ್. ಹಾಗಾಗಿ ಜನ ವಾಟರ್ ಫಿಲ್ಟರ್, ಅಕ್ವಾ ಗಾರ್ಡ್, ಕೆಂಟ್‌ನಂಥ ನೀರು ಶುದ್ಧಕ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಆ ಯಂತ್ರಗಳ್ಳೋ, ಬಹಳ ದುಬಾರಿ. ಈ ಸಮಸ್ಯೆಗೆ ಮುಕ್ತಿ ನೀಡಲೆಂದೇ ಬೆಳಗಾವಿಯ ಹುಡುಗ, ದೇಶೀ ಫಿಲ್ಟರ್ ಫ್ಯಾಕ್ಟರಿಯನ್ನೇ ತೆರೆದಿದ್ದಾರೆ! ಈಗ ದೇಶ- ವಿದೇಶಗಳಲ್ಲಿ ಈತನ ಸಿಂಪಲ್ ವಾಟರ್ ಫಿಲ್ಟರ್ ಹೆಸರುವಾಸಿ. ಬೆಳಗಾವಿಯ ಖಾಸಬಾಗ್‌ನ ನಿರಂಜನ ಕಾರಗಿ ಎಂಬ 24 ವರ್ಷದ ಯುವ ಉದ್ಯಮಿ ವಾಟರ್ ಫಿಲ್ಟರ್ ಮೂಲಕ ಇಂದು ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದಾರೆ. ನೇರವಾಗಿ ಬಾಟಲಿಗೆ ಫಿಲ್ಟರ್ ಅಳವಡಿಸಿ ನೀರು ಶುದ್ಧೀಕರಿಸುವ ಈ ವಿಧಾನ, ಬಹಳ ಸರಳ.
ಇದು ನಿರ್ನಲ್ ಬ್ರ್ಯಾಂಡ್… : ನಿರ್ನಲ್ ಎಂಬ ಕಂಪನಿ ಸ್ಥಾಪಿಸಿ, ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಫಿಲ್ಟರ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡಿದ ಹಿರಿಮೆ ನಿರಂಜನ್‌ರದ್ದು. ಬೆಳಗಾವಿಯ ಅಗಡಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿರುವ ನಿರಂಜನ್ ಕಾರಗಿ, ಕಾಲೇಜು ದಿನಗಳಲ್ಲಿಯೇ ಈ ಫಿಲ್ಟರ್ ಉತ್ಪಾದನೆ ಆರಂಭಿಸಿದ್ದರು. ಸರ್ಕಾರಿ ಶಾಲೆಯ ಮಕ್ಕಳು ಟ್ಯಾಂಕ್ ನಲ್ಲಿದ್ದ ಕಲುಷಿತ ನೀರು ಕುಡಿಯುತ್ತಿರುವುದನ್ನು ಗಮನಿಸಿದ್ದ ನಿರಂಜನ್‌ಗೆ ಆ ಕ್ಷಣ ಹೊಳೆದಿದ್ದೇ ವಾಟರ್ ಫಿಲ್ಟರ್ ಐಡಿಯಾ.
ಸ್ಪೆಷಲ್ ಫಿಲ್ಟರ್.. :ಲೀಜಾದ ನೀರು ಇದ್ದರೂ ಅದನ್ನು ಶುದ್ಧೀಕರಿಸುವ ಸಾಮರ್ಥ್ಯ ಈ ಫಿಲ್ಟರ್‌ಗಿದೆ. ಬ್ಯಾಕ್ಟೀರಿಯಾ ನಿರ್ಮೂಲನೆ ಮಾಡುವ ಲ್ಯಾಬ್ ತಂತ್ರಜ್ಞಾನದ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ಸರ್ಕಾರ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾರ್ಟ್ ಆಪ್ ಮಹಾರಾಷ್ಟ್ರಸೇರಿದಂತೆ ಅನೇಕ ಖಾಸಗಿ ಕಂಪನಿಗಳೂ ನಿರಂಜನ್‌ಗೆ ಉದ್ಯಮ ಆರಂಭಿಸಲು ನೆರವಾಗಿವೆ.
ಸ್ಥಳೀಯ ಕಚ್ಚಾವಸ್ತು ಬಳಕ : 2017ರಿಂದ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಫಿಲ್ಟರ್ ತಯಾರಿಸುತ್ತಿರುವ ನಿರಂಜನ್, ಕೇವಲ 2000 ರೂ. ಬಂಡವಾಳದಿಂದ ಉದ್ಯಮ ಆರಂಭಿಸಿದ್ದರು. ಇದುವರೆಗೂ ಒಂದು ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸಿದ್ದಾರೆ. ಆರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಈ ಫಿಲ್ಟರ್ ದರ ಕೇವಲ 30 ರೂಪಾಯಿ. ಇದರಿಂದ 100 ಲೀ.ವರೆಗೆ ನೀರು ಶುದ್ಧೀಕರಿಸಬಹುದಾಗಿದೆ. ಈಗ ಆವಿಷ್ಕರಿಸಲಾದ ನೂತನ ಫಿಲ್ಟರ್ 1500 ಲೀ. ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಇದರ ಮಾರುಕಟ್ಟೆ ದರ 450 ರೂ.! “30 ಪೈಸೆಗೆ ಒಂದು ಲೀ. ನೀರು ಶುದ್ಧೀಕರಿಸುವ ಉದ್ದೇಶ ನಮ್ಮದು. ಇದು ದೇಶದಲ್ಲಿಯೇ ಅತಿ ಕಡಿಮೆ ದರದ ಫಿಲ್ಟರ್’ ಎನ್ನುತ್ತಾರೆ ನಿರಂಜನ. 160 ದೇಶಗಳು ಪಾಲ್ಗೊಂಡಿದ್ದ ವಿಶ್ವ ಇನ್ನೋವೇಶನ್ ಕಾಂಗ್ರೆಸ್- 2020ರ ಸ್ಪರ್ಧೆಯಲ್ಲಿ ಟಾಪ್ 50 ಆವಿಷ್ಕಾರಗಳಲ್ಲಿ, ಇವರ ಫಿಲ್ಟರ್ ಕೂಡ ಒಂದು.
ಯೋಧರಿಗೂ ಫಿಲ್ಟರ್ ಆಧಾರ : ಫಿಲ್ಟರ್‌ಗಳನ್ನು ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಸಿಆರ್‌ಪಿಎಫ್ ಕಮಾಂಡೋಗಳು, ರೈತರು, ನೇಕಾರರು, ಕಾರ್ಮಿಕರು ಬಳಸುತ್ತಿದ್ದಾರೆ. ಯುಎಸ್‌ಎ, ಆಫ್ರಿಕ, ಮಲೇಷ್ಯಾ, ಶ್ರೀಲಂಕಾ ಸೇರಿ 15 ದೇಶಗಳಲ್ಲಿ ಮಾರಾಟವಾಗಿದೆ.
ಫಿಲ್ಟರ್ ವಿಶೇಷತೆ :
- ಫಿಲ್ಟರ್ ವಿಶೇಷತೆ ಇದಕ್ಕೆ ವಿದ್ಯುತ್ ಅಗತ್ಯವಿಲ್ಲ. ಒಂದು ಹನಿ ನೀರೂ ವ್ಯರ್ಥ ಆಗದು.
- ದುಬಾರಿ ಫಿಲ್ಟರ್‌ಗಳ ನಡುವೆ ಇದು ಅತಿ ಕಡಿಮೆ ದರದ ಫಿಲ್ಟರ್.
- ಜೇಬಿನಲ್ಲಿ ಹಾಕಿಕೊಂಡು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು.
- ನೀರಿನ ಬಾಟಲಿಗೆ ಅಳವಡಿಸಬಹುದು.
-ಭೈರೋಬಾ ಕಾಂಬಳೆ