ತಿರುವನಂತಪುರ : ದೇವಸ್ಥಾನವೊಂದರಲ್ಲಿ ತುಲಾಭಾರ ವಿಧಿ ವೇಳೆ ತುಲಾಭಾರ ಕುಸಿದು ಸಂಭವಿಸಿದ ಆಕಸ್ಮಿಕ ಅವಘಡದಿಂದ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ತಿರುವನಂತಪುರ ಸಂಸದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಆಸ್ಪತ್ರೆಗೆ ತೆರಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖವಾಗಲು ಹಾರೈಸಿದರು.
ಬಿರುಸಿನ ಚುನಾವಣಾ ಪ್ರಚಾರಾಭಿಯಾನದ ನಡುವೆಯೂ ಬಿಡುವು ಮಾಡಿಕೊಂಡು ತನ್ನನ್ನು ಕಾಣಲು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ತೋರಿರುವ ಸದ್ಭಾವನೆಯನ್ನು ಶಶಿ ತರೂರ್ ಟ್ವಿಟರ್‌ನಲ್ಲಿ ಕೊಂಡಾಡಿದರು. ಭಾರತೀಯ ರಾಜಕಾರಣದಲ್ಲಿ ಈ ರೀತಿಯ ನಾಗರಿಕ ಸದ್ಭಾವನೆ ಅತ್ಯಪರೂಪ ಎಂದು ತರೂರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
63ರ ಹರೆಯದ ತರೂರ್ ಅವರಿಗೆ ತಲೆಯ ಗಾಯಗಳಿಗೆ ಎಂಟು ಸ್ಟಿಚ್ ಹಾಕಲಾಗಿದೆ. ಅವರ ಕಾಲು ಕೂಡ ಜಖಂ ಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ತುಲಾಭಾರ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ತಕ್ಕಡಿ ಮೇಲ್ಭಾಗದ ಕೊಂಡಿ ತುಂಡಾಗಿ ಕಬ್ಬಿಣದ ಪಟ್ಟಿ ಕೆಳಗುರುಳಿದಾಗ ತರೂರ್ ಅವರ ತಲೆಯ ಮೇಲೆಯೇ ಬಿದ್ದಿತ್ತು. ಹಾಗಾಗಿ ಅವರಿಗೆ ತಲೆಗೆ ಗಾಯಗಳಾಗಿದ್ದವು.
ಮೊದಲು ಅವರನ್ನು ಸರಕಾರಿ ಆಸ್ಪತ್ರೆಗೆ ಒಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾದ ಬಲಿಕ ಅವರನ್ನು ತಿರುವನಂತಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ವಿಸ್ತೃತ ಪರೀಕ್ಷೆಗಾಗಿ ಒಯ್ಯಲಾಯಿತು. ತರೂರ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.