Advertisement

ಕೇಂದ್ರ ಸರ್ಕಾರದ ಪರ ಗೌರವ ಸಲ್ಲಿಸಿದ ನಿರ್ಮಲಾ ಸೀತಾರಾಮನ್‌

09:58 AM Dec 30, 2019 | sudhir |

ಬೆಂಗಳೂರು: ಇಹಲೋಕ ತ್ಯಜಿಸಿ ರಾಮನ ಸನ್ನಿಧಿ ಸೇರಿದ ಯತಿಶ್ರೇಷ್ಠ ವಿಶ್ವೇಶತೀರ್ಥ ಸ್ವಾಮೀಜಿಯವರ ಅಂತಿಮ ದರ್ಶನವನ್ನು ರಾಜಕೀಯ ನಾಯಕರು ಹಾಗೂ ನಾಡಿನ ಪ್ರಮುಖ ಮಠಾಧೀಶರು ಪಡೆದರು.

Advertisement

ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಮಧ್ಯಹ್ನ 4 ಗಂಟೆಯ ಹೊತ್ತಿಗೆ ಉಡುಪಿಯಿಂದ ಬೆಂಗಳೂರಿಗೆ ತರಲಾಗಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತುಳಸಿ ಮಾಲೆ ಅರ್ಪಿಸುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ರಾಜಕಾರಣಿಗಳು, ಮಠಾಧೀಶರು ಹಾಗೂ ಗಣ್ಯರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಬಸವರಾಜ್‌ ಬೊಮ್ಮಾಯಿ, ಎಸ್‌.ಸುರೇಶ್‌ಕುಮಾರ್‌, ಆರ್‌. ಅಶೋಕ್‌, ವಿ. ಸೋಮಣ್ಣ, ಶಾಸಕ ಅರವಿಂದ ಲಿಂಬಾವಳಿ, ರವಿ ಸುಬ್ರಮಣ್ಯ, ಎಸ್‌.ಎ.ರಾಮದಾಸ್‌, ಸಂಸದರಾದ ಅನಂತಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸ್ವಾಮೀಜಿಯ ಅಂತಿಮ ದರ್ಶನ ಪಡೆದರು.

ಪ್ರಧಾನಿ, ಅಮಿತ್‌ ಶಾ ಗೌರವ:
ಧರ್ಮಗುರುಗಳಾಗಿದ್ದರೂ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಖುದ್ದು ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಶ್ರೀಗಳ ಅಂತಿಮ ದರ್ಶನಕ್ಕೆ ಕಳುಹಿಸಿಕೊಡಲಾಗಿತ್ತು.

ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ವಯಕ್ತಿಕ ಗೌರವ ಸಲ್ಲಿಸುವುದರ ಜೊತೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಪರವಾಗಿ ಪ್ರತ್ಯೇಕವಾಗಿಯೇ ಸ್ವಾಮೀಜಿಗಳಿಗೆ ಪುಷ್ಪಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು.

Advertisement

ಶ್ರೀಗಳ ಪಾರ್ಥೀವ ಶರೀರ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಆಗಮಿಸಿದ ತಕ್ಷಣವೇ ಗೌರವ ಸಲ್ಲಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಆಗಮನದ ಸಂದರ್ಭದಲ್ಲಿ ಮತ್ತೂಂದು ಬಾರಿ ಸ್ವಾಮೀಜಿಯ ಅಂತಿಮ ದರ್ಶನ ಪಡೆದರು.

ಕಾದು ಕುಳಿತ ಸಿಎಂ:
ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಾರ್ವಜನಿಕ ದರ್ಶನ ಮುಕ್ತಾಯವಾಗುವವರೆಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಚಿವರು ಅಲ್ಲಿಯೇ ಕುಳಿತುಕೊಂಡಿದ್ದರು. ಸಾರ್ವಜನಿಕರ ದರ್ಶನ ಮುಗಿದ ಕೂಡಲೇ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ಮಾಡುವ ಪೂರ್ಣ ಪ್ರಜ್ಞ ವಿದ್ಯಾಪೀಠಕ್ಕೆ ತೆರಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು.

ಪ್ರತಿಪಕ್ಷದ ನಾಯಕರ ದರ್ಶನ: ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಹಿರಿಯ ನಾಯಕರಾದ ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಎಂ.ವೀರಪ್ಪ ಮೊಯಿಲಿ, ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ನಾಪುರ, ಸ್ವಾಮೀಜಿಗಳ ಅಂತಿಮ ದರ್ಶನ ಪಡೆದರು.

ಜೆಡಿಎಸ್‌ ಮುಖಂಡ ಟಿ.ಎ.ಶರವಣ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಆರ್‌ಎಸ್‌ಎಸ್‌ನ ಪ್ರಮುಖರಾದ ಭಯ್ನಾಜಿ ಜೋಷಿ, ತೇಜಸ್ವಿನಿ ಅನಂತಕುಮಾರ್‌ ಶ್ರೀಗಳ ಅಂತಿಮ ದರ್ಶನ ಪಡೆದರು.

ದರ್ಶನ ಪಡೆದ ಮಠಾಧೀಶರು:
ನಮ್ಮೆಲ್ಲರನ್ನು ಅಗಲಿರುವ ಹಿರಿಯ ಯತಿಗಳ ದರ್ಶನ ಪಡೆಯಲು ನಾಡಿನ ಮಠಾಧೀಶರಾದ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರ ಚನ್ನಮಲ್ಲಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಅಂತಿಮ ದರ್ಶನ ಪಡೆದರು.

ಜವಾಬ್ದಾರಿ ನಿರ್ವಹಿಸಿದ ಶಾಸಕರು:
ಶ್ರೀಗಳ ಪಾರ್ಥೀವ ಶರೀರ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಆಗಮಿಸಿ, ಸಾರ್ವಜನಿಕರ ಅಂತಿಮ ದರ್ಶನ ಮುಗಿಯುವವರೆಗೂ ಎಲ್ಲ ಕಾರ್ಯಗಳು ಸುಸೂತ್ರವಾಗಿ ನೆರವೇರಲು ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ತಮ್ಮ ಜವಾಬ್ದಾರಿ ನಿರ್ವಹಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಕೂಡ ಶ್ರೀಗಳ ಅಂತಿಮ ದರ್ಶನ ಪಡೆದು ಕೆಲ ಹೊತ್ತು ವೇದಿಕೆಯ ಮೇಲೆಯೇ ನಿಂತು ಸಾರ್ವಜನಿಕರ ಅಂತಿಮ ದರ್ಶನ ಸರಾಗವಾಗಿ ನಡೆಯುವಂತೆ ಉಸ್ತುವಾರಿ ನೋಡಿಕೊಂಡರು.

ಶ್ರೇಷ್ಠ ಸಂತರನ್ನು ಕಳೆದುಕೊಂಡಿದ್ದೇವೆ. ಯಾವುದೇ ಜಾತಿಯವರು ಇದ್ದರೂ ಕೂಡ ಅವರನ್ನು ಸಮಾನರನ್ನಾಗಿ ಕಾಣುತ್ತಿದ್ದರು. ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಸಾಕಷ್ಟು ಬಾರಿ ನನ್ನ ಮನೆಗೆ ಬಂದು ಹೋಗಿದ್ದರು.
– ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು.

ವಿಶ್ವೇಶತೀರ್ಥ ಸ್ವಾಮೀಜಿಗಳು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದರು. ಅವರ ಸಾವು ಯಾರೋ ಒಬ್ಬರಿಗೆ ನಷ್ಟವಲ್ಲ. ಇಡೀ ದೇಶಕ್ಕೆ ಆಗಿರುವ ನಷ್ಟ. ಅವರ ಅಗಲಿಕೆ ದುಖಃ ತಂದಿದೆ.
– ರಾಮಲಿಂಗಾ ರೆಡ್ಡಿ, ಮಾಜಿ ಸಚಿವ.

ಶ್ರೀಗಳು ರಾಷ್ಟ್ರದ ಉದ್ದಗಲಕ್ಕೂ ದೇಶದ ಸಂಸ್ಕೃತಿ, ಸಂವಿಧಾನವನ್ನು ಸುಧಾರಣೆ ಮಾಡಿದ್ದರು. ತಮ್ಮ ಜೀವನವನ್ನು ಸಾರ್ವಜನಿಕರಿಗೆ ಮೀಸಲಿಟ್ಟಿದ್ದರು. ಹಿಂದು, ಮುಸ್ಲಿàಂ ಕ್ರೈಸ್ತ ಧರ್ಮದ ಜನರಿಗಾಗಿ ಶ್ರಮಿಸಿದ್ದರು. ಬಡವರಿಗಾಗಿ ಹೋರಾಟ ಮಾಡಿದ್ದರು.
– ವಿ.ಸೋಮಣ್ಣ, ವಸತಿ ಸಚಿವ.

ಶ್ರೀಗಳು ಅಗಲಿರುವುದರಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಅವರ ಅಗಲಿಕೆ ಬಹಳ ನೋವು ತಂದಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಇಪ್ತಿಯಾರ್‌ ಕೂಟ ಏರ್ಪಡಿಸಿ ಸಾಮರಸ್ಯ ಸಾರಿದ್ದರು.
– ಯು.ಟಿ. ಖಾದರ್‌, ಮಾಜಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next