ನವದೆಹಲಿ: ದೇಶದಲ್ಲಿನ ಹಣದುಬ್ಬರವು ನಿರ್ವಹಿಸಬಹುದಾದ ಮಟ್ಟದಲ್ಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಆರ್‌ಬಿಐನ ರೆಪೋ ದರ ಹೆಚ್ಚಳ ನಿರ್ಧಾರವು ಮಾರುಕಟ್ಟೆಗೆ ಧನಾತ್ಮಕವಾದ ಸಂದೇಶವನ್ನು ಕಳುಹಿಸಿದೆ ಎಂದಿದ್ದಾರೆ.
“ಭಾರತದ ಷೇರು ಮಾರುಕಟ್ಟೆಯನ್ನು ತೊರೆದಿದ್ದ ಶೇ.70ಕ್ಕೂ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರು ಕಳೆದ ಎರಡು ತಿಂಗಳಲ್ಲಿ ಮರಳಿದ್ದಾರೆ. ಭಾರತ ಈಗ ಸದೃಢ ಆರ್ಥಿಕ ಚಟುವಟಿಕೆ ಪರ್ವವನ್ನು ಪ್ರವೇಶಿಸುತ್ತಿದೆ,’ ಎಂದರು.
ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ದೊಡ್ಡ ಮಟ್ಟದ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ದೊಡ್ಡ ಹೂಡಿಕೆದಾರರನ್ನು ಭಾರತದ ಕಡೆ ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅಗತ್ಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ನಿರ್ಮಲ ಸೀತಾರಾಮನ್ ಹೇಳಿದರು.
ಜಾಗತಿಕ ಬೆಳವಣಿಗೆಗಳಿಂದಾಗಿ ಕಂಪನಿಗಳು ಅನುಭವಿಸುತ್ತಿರುವ ಅಡಚಣೆಗಳ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಜಗತ್ತಿನಲ್ಲಿ ಏನು ಬೆಳವಣಿಗೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಕಂಪನಿಗಳು ಸದಾ ಕಣ್ಣು ಮತ್ತು ಕಿವಿ ತೆರೆದಿರಬೇಕಾಗುತ್ತದೆ ಎಂದರು.
ಕಂಪನಿಗಳ ದಿವಾಳಿ ಸಂಹಿತೆಗೆ ಸಂಬಂಧಿಸಿದಂತೆ ವೃತ್ತಿಪರರ ಪ್ರಮುಖ್ಯತೆಯನ್ನು ಮತ್ತು ಈ ಬಗ್ಗೆ ಕಂಪನಿಗಳು ಕಾಳಜಿ ವಹಿಸುವಂತೆ ಮಾಡಲು ಪ್ರಯತ್ನಗಳು ಹೆಚ್ಚಬೇಕು ಎಂದು ಸೀತಾರಾಮನ್ ಒತ್ತಿಹೇಳಿದರು.