Advertisement

Adani ಜತೆಗಿನ ವಾಣಿಜ್ಯ ಒಪ್ಪಂದ ರದ್ದುಪಡಿಸಲಿ:ಕಾಂಗ್ರೆಸ್‌ಗೆ ಕೇಂದ್ರ ವಿತ್ತ ಸಚಿವೆ ಸವಾಲು

11:15 PM Apr 06, 2023 | Team Udayavani |

ಬೆಂಗಳೂರು: ಸಾಮರ್ಥ್ಯವಿದ್ದರೆ ಅದಾನಿ ಸಮೂಹ ಸಂಸ್ಥೆಯ ಜತೆಗೆ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದಗಳನ್ನು ರದ್ದುಪಡಿಸಲಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸವಾಲು ಹಾಕಿದ್ದಾರೆ.

Advertisement

ಅದಾನಿ ಕಂಪೆನಿಗೆ ಕೇಂದ್ರ ಸರಕಾರ ಯಾವುದೇ ಸಹಾಯ ಮಾಡಿಲ್ಲ. ಆದಾಗಿಯೂ ನಿರಾಧಾರ ಆರೋಪ ಮಾಡುವುದನ್ನು ಕಾಂಗ್ರೆಸ್‌ ನಿಲ್ಲಿಸಿಲ್ಲ. ಸುಳ್ಳನ್ನೇ ಸತ್ಯವಾಗಿಸುವ ಹುನ್ನಾರವನ್ನು ಅತ್ಯಂತ ವ್ಯವಸ್ಥಿತವಾಗಿ ಕಾಂಗ್ರೆಸ್‌ ನಡೆಸುತ್ತಿದೆ ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಛತ್ತೀಸ್‌ಗಢ, ಕೇರಳ, ರಾಜಸ್ಥಾನ ಸೇರಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಯೋಜನೆಗಳ ಅನುಷ್ಠಾನಕ್ಕಾಗಿ ಅದಾನಿ ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಇಬ್ಬಗೆಯೆ ನಡೆ ಏಕೆಂದು ಕಾಂಗ್ರೆಸ್‌ ನಾಯಕರೇ ತಿಳಿಸಬೇಕು. ಎಲ್ಲ ವಿಷಯಗಳ ಬಗ್ಗೆ ಪ್ರಶ್ನಿಸುವುದಕ್ಕೆ ಮತ್ತು ಉತ್ತರ ಪಡೆಯುವುದಕ್ಕೆ ವಿಪಕ್ಷಗಳಿಗೆ ಅಧಿಕಾರವಿದೆ.

ಆದರೆ ಅಧಿವೇಶನದಲ್ಲಿ ಅಸಂಸದೀಯ ಪದ ಬಳಕೆ, ಗದ್ದಲವೆಬ್ಬಿಸುವುದು, ಸರಕಾರ ಉತ್ತರಿಸಲು ಮುಂದಾದಾಗ ಸಭಾತ್ಯಾಗವನ್ನು ಕಾಂಗ್ರೆಸ್‌ ಮಾಡುತ್ತಿದೆ. ಇದು ಸಂಸದೀಯ ನಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸ್ಯಾಸ್ಪದ
ಕ್ಷಮೆ ಕೇಳುವುದಕ್ಕೆ ನಾನು ವೀರ ಸಾವರ್ಕರ್‌ ಅಲ್ಲ ಎಂದು ರಾಹುಲ್‌ ಗಾಂಧಿ ತಮ್ಮನ್ನು ತಾವು ವಿಜೃಂಭಿಸಿಕೊಂಡಿದ್ದಾರೆ. ಗಾಂಧೀಜಿಯನ್ನು ಕೊಂದದ್ದು ಆರೆಸ್ಸೆಸ್‌ ಎಂಬ ಹೇಳಿಕೆ ನೀಡಿ ಅನಂತರ ಸುಪ್ರೀಂ ಕೋರ್ಟ್‌ನಲ್ಲಿ ಲಿಖೀತ ಕ್ಷಮಾಪಣೆ ಪತ್ರ ಬರೆದುಕೊಟ್ಟದ್ದನ್ನು ಅವರು ಮರೆತಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪದೇಪದೆ ರಫೇಲ್‌ ಯುದ್ಧ ವಿಮಾನ ಖರೀದಿ ಬಗ್ಗೆ ಆಪಾದಿಸಿದ್ದರು. ಈ ಆರೋಪವನ್ನೂ ಸಾಬೀತುಪಡಿಸಲಾಗದೆ ಕ್ಷಮೆ ಕೋರಿದರು. ಇಂತಹವರು ಸಾವರ್ಕರ್‌ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

ಕರ್ನಾಟಕಕ್ಕೆ ಆದ್ಯತೆ
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್‌. ಆದರೆ ರಾಹುಲ್‌ ಗಾಂಧಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸುತ್ತಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಹಿರಿಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಎಲ….ಕೆ. ಆಡ್ವಾಣಿ ಹಾಗೂ ಇನ್ನಿತರರನ್ನು ಬೆಂಗಳೂರಿನ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಈ ಕಾರಣಕ್ಕೆ ಬೆಂಗಳೂರಿನೊಂದಿಗೆ ಬಿಜೆಪಿ ಭಾವನಾತ್ಮಕ ಸಂಬಂಧ ಹೊಂದಿದೆ ಎಂದರು.

ತೆರಿಗೆ ಎಲ್ಲರಿಗೂ ನೋವಿನ ವಿಚಾರ: ನಿರ್ಮಲಾ
ಬೆಂಗಳೂರು: ತೆರಿಗೆ ಅಂದರೆ ಎಲ್ಲರಿಗೂ ನೋವಿನ ವಿಚಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಬಿಜೆಪಿ ಪ್ರಣಾಳಿಕೆ ಅಭಿಯಾನದ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಉದ್ದಿಮೆದಾರರ ರೆಸಿಡೆನ್ಸಿ ಅಸೋಸಿಯೇಶನ್‌, ಚಾರ್ಟರ್ಡ್‌ ಅಕೌಂಟೆಂಟ್ಸ್‌ ಹಾಗೂ ಬ್ಯಾಂಕರ್ಗಳ ಜತೆ ಸಮಾಲೋಚನೆ ನಡೆಸಿದರು. ಡೇಕೇರ್‌ ಕೇಂದ್ರಗಳ ಮೇಲಿನ ಜಿಎಸ್ಟಿ ಸೇರಿ ಮತ್ತಿತರ ವಲಯಗಳ ಮೇಲಿನ ಜಿಎಸ್ಟಿ ಇಳಿಕೆ ಕುರಿತಂತೆ ಮಾಡಲಾದ ಮನವಿಗೆ ಪ್ರತಿಕ್ರಿಯಿಸಿ, ತೆರಿಗೆ ಅಂದರೆ ಎಲ್ಲರಿಗೂ ನೋವು ಎಂದು ಹೇಳುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ರೆರಾ ಕಾಯ್ದೆ ಜಾರಿಯ ತೊಡಕು , ತೆರಿಗೆ ಸಂದಾಯ ಸೇರಿದಂತೆ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವ ಭರವಸೆ ನೀಡಿದರು.
ಆರೋಗ್ಯ ಸಚಿವ ಡಾ| ಸುಧಾಕರ್‌ ಮಾತನಾಡಿ, ಬಿಜೆಪಿ ಪ್ರಣಾಳಿಕೆ ಇತರ ಪಕ್ಷಗಳಂತೆ ರಾಜಕೀಯ ಪ್ರೇರಿತವಾಗಿರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next