ನವದೆಹಲಿ: ದೇಶಾದ್ಯಂತ ಆಕ್ರೋಶದ ಬೆಂಕಿ ಹಚ್ಚಿದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ವಿಧಿಸಿರುವ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ನಾಲ್ವರು ಅಪರಾಧಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಇದೊಂದು ಅತ್ಯಂತ ಅಮಾನವೀಯ, ಬರ್ಬರ ಕೃತ್ಯವಾಗಿದೆ.
ಅಪರಾಧಿಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಿಲ್ಲ. ಇವರು ಕ್ಷಮೆಗೆ ಅರ್ಹರಾದವರು ಅಲ್ಲ. ಹಾಗಾಗಿ ಎಲ್ಲಾ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆಯೇ ಸೂಕ್ತ ಎಂದು ಮೂವರು ನ್ಯಾಯಮೂರ್ತಿಗಳು ಒಮ್ಮತದ ಅಭಿಪ್ರಾಯದ ತೀರ್ಪನ್ನು ಪ್ರಕಟಿಸಿದರು.
2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದಿದ್ದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಆರ್.ಬಾನುಮತಿ ಹಾಗೂ ಜಸ್ಟೀಸ್ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ದೆಹಲಿ ಹೈಕೋರ್ಟ್ ನೀಡಿದ್ದ ಗಲ್ಲುಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ. ಸಂತ್ರಸ್ತೆಯ ಮರಣಪೂರ್ವದ ಹೇಳಿಕೆ ಸತ್ಯಾಂಶದಿಂದ ಕೂಡಿದೆ. ಇದರಲ್ಲಿ ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲ ಎಂದು ತ್ರಿಸದಸ್ಯ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ತನಿಖೆಗೆ ಆಧುನಿಕ ಹಾಗೂ ಮುಂದುವರಿದ ತಂತ್ರಜ್ಞಾನವನ್ನು ಬಳಸಲಾಗಿದೆ. ಹಾಗಾಗಿ ಪ್ರಾಸಿಕ್ಯೂಷನ್ ತನಿಖೆಯ ಅಂಶವನ್ನು ನಂಬುತ್ತದೆ. ಅಷ್ಟೇ ಅಲ್ಲ ಸಂತ್ರಸ್ತೆಯ ಮರಣಪೂರ್ವ ಹೇಳಿಕೆಯಿಂದಾಗಿ ಇದರಲ್ಲಿ ಯಾವುದೇ ಅನುಮಾನಕ್ಕೆ ಎಡೆ ಇಲ್ಲ ಎಂದು ಹೇಳಿದೆ.
ಅಪರಾಧಿಗಳಾದ ಮುಕೇಶ್, ಪವನ್, ವಿನಯ್ ಶರ್ಮ ಮತ್ತು ಅಕ್ಷಯ್ ತಮಗೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ವಿಧಿಸಿರುವ ಗಲ್ಲು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಕೋರ್ಟ್ ಹಾಲ್ ನಲ್ಲಿ ಕುಳಿತದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.