ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಗಂಟೆಗೆ ನೇಣಿಗೇರಿಸಲು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಸೋಮವಾರ ಹೊಸ ಡೆತ್ ವಾರಂಟ್ ಅನ್ನು ಜಾರಿಗೊಳಿಸಿದೆ.
ಪ್ರಕರಣದಲ್ಲಿ ದೋಷಿತರಾಗಿರುವ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್ ಸೇರಿದಂತೆ ನಾಲ್ವರನ್ನು ಮಾರ್ಚ್ 3ರಂದು ಮುಂಜಾನೆ 6ಗಂಟೆಗೆ ನೇಣಿಗೇರಿಸುವಂತೆ ಹೊಸ ದಿನಾಂಕ ನಿಗದಿಪಡಿಸಿದೆ.
ಅಪರಾಧಿಗಳಿಗೆ ಸಂಬಂಧಿಸಿದ ವರದಿಯನ್ನು ತಿಹಾರ್ ಜೈಲು ಅಧಿಕಾರಿಗಳು ಕೋರ್ಟ್ ಗೆ ಹಸ್ತಾಂತರಿಸಿದ್ದರು. ನಾಲ್ವರು ಅಪರಾಧಿಗಳಲ್ಲಿ ಮೂವರು ಈಗಾಗಲೇ ಎಲ್ಲಾ ಕಾನೂನು ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಬೇರೆ ಯಾವುದೇ ಕೋರ್ಟ್ ಗಳಲ್ಲಿ ಯಾವುದೇ ಅರ್ಜಿ ವಿಚಾರಣೆಗೆ ಬಾಕಿ ಇಲ್ಲ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ಕೋರ್ಟ್ ಗಮನಕ್ಕೆ ತಂದಿದ್ದರು.
ಅಲ್ಲದೇ ಏಳು ದಿನಗಳೊಳಗೆ ಎಲ್ಲಾ ಕಾನೂನು ಅವಕಾಶ ಬಳಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಅಪರಾಧಿಗಳಿಗೆ ಅಂತಿಮ ಗಡುವು ನೀಡಿದ್ದು, ಆ ಅವಧಿ ಮುಕ್ತಾಯಗೊಂಡಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಫೆ.14ರಂದು ವಜಾಗೊಳಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಫೆ.5ರಂದು ನಾಲ್ವರು ದೋಷಿಗಳಿಗೆ ಎಲ್ಲಾ ಕಾನೂನು ಅವಕಾಶ ಬಳಸಿಕೊಳ್ಳಲು ಒಂದು ವಾರಗಳ ಕಾಲಾವಕಾಶ ನೀಡಿತ್ತು.