ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ಫೆ.1ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಲು ತಿಹಾರ್ ಜೈಲಿನ ಅಧಿಕಾರಿಗಳು ಎಲ್ಲ ತಯಾರಿಗಳನ್ನೂ ಆರಂಭಿಸಿದ್ದಾರೆ. ಇದರ ಭಾಗವಾಗಿ, ನಾಲ್ವರು ಅಪರಾಧಿಗಳಿಗೂ ತಮ್ಮ ಕೊನೆಯ ಆಸೆಯಿದ್ದರೆ ತಿಳಿಸುವಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಆದರೆ, ನಾಲ್ವರು ಕೂಡ ‘ಮೌನ’ಕ್ಕೆ ಶರಣಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರವೇ ಈ ಕುರಿತು ಪ್ರಶ್ನಿಸಲಾಗಿದ್ದರೂ, ಇನ್ನೂ ಯಾರಿಂದಲೂ ಉತ್ತರ ಬಂದಿಲ್ಲ. ಅವರ ಎಲ್ಲ ಆಸೆಯನ್ನೂ ಈಡೇರಿಸಲು ಆಗುವುದಿಲ್ಲ. ಆದರೆ, ಸಾಧ್ಯವಾಗುವಂಥ ಆಸೆಯೇನಾದರೂ ಇದ್ದರೆ, ಅದನ್ನು ಗಲ್ಲಿಗೇರಿಸುವ ಮುನ್ನ ಈಡೇರಿಸಲಾಗುತ್ತದೆ ಎಂದು ಹೆಚ್ಚುವರಿ ಐಜಿ ರಾಜ್‌ಕುಮಾರ್ ಹೇಳಿದ್ದಾರೆ. ‘ನಿಮಗೆ ಯಾರನ್ನಾದರೂ ಭೇಟಿಯಾಗುವ ಇಚ್ಛೆ ಇದೆಯೇ, ನಿಮ್ಮ ಆಸ್ತಿಯನ್ನು ಯಾರ ಹೆಸರಿಗಾದರೂ ಬರೆಯಲು ಇಚ್ಛಿಸುತ್ತೀರಾ’ ಎಂದೂ ಪ್ರಶ್ನಿಸಲಾಗಿದ್ದು, ಯಾವುದಕ್ಕೂ ಅವರು ಉತ್ತರಿಸುತ್ತಿಲ್ಲ ಎಂದಿದ್ದಾರೆ.
ಜತೆಗೆ, ನಾಲ್ವರೂ ತೀವ್ರ ಒತ್ತಡಕ್ಕೊಳಗಾದವರಂತೆ ಕಂಡು ಬರುತ್ತಿದ್ದು, ಮಿತ ಆಹಾರ ಸೇವಿಸುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಅಪರಾಧಿಗಳ ಕುಟುಂಬ ಸದಸ್ಯರಿಗೆ ವಾರಕ್ಕೆ ಎರಡು ಬಾರಿ ಜೈಲಿಗೆ ಭೇಟಿ ನೀಡಲು ಅವಕಾಶ ನೀಡಿದ್ದೇವೆ. ಅವರ ಜೈಲು ಕೊಠಡಿಯ ಹೊರಗೆ ಕನಿಷ್ಠ ಇಬ್ಬರು ಸಿಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿ ದಿನವೂ ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಆರೋಗ್ಯ ಸಹಜವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.
ಜಡ್ಜ್ ವರ್ಗಾವಣೆ: ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇತ್ತೀಚೆಗೆ ಡೆತ್ ವಾರಂಟ್ ಹೊರಡಿಸಿದ್ದ ಸೆಷನ್ಸ್ ಕೋರ್ಟ್ ಜಡ್ಜ್ ಸತೀಶ್ ಕುಮಾರ್ ಅರೋರಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಸೆಷನ್ಸ್ ಜಡ್ಜ್ ಅರೋರಾ ಅವರನ್ನು ಪ್ರತಿನಿಯೋಜನೆ ಆಧಾರದಲ್ಲಿ ಸುಪ್ರೀಂಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್ ಆಗಿ ಒಂದು ವರ್ಷ ಕಾಲಕ್ಕೆ ನೇಮಕ ಮಾಡಲಾಗಿದೆ. ಹೀಗಾಗಿ, ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ಯಾವುದಾದರೂ ಹೊಸ ಅರ್ಜಿ ಸಲ್ಲಿಕೆಯಾದರೆ, ಅದರ ವಿಚಾರಣೆಯನ್ನು ಹೊಸ ನ್ಯಾಯಾಧೀಶರು ನಡೆಸಲಿದ್ದಾರೆ.
ಸಂತ್ರಸ್ತರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕಲ್ಲವೇ?
‘ನಾವು ಕೇವಲ ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತ್ರ ಚಿಂತಿಸಿದರೆ ಸಾಕೇ? ಸಂತ್ರಸ್ತರ ಹಕ್ಕುಗಳ ಬಗ್ಗೆಯೂ ಗಮನಹರಿಸಬೇಕಲ್ಲವೇ?’ ಹೀಗೆಂದು ಪ್ರಶ್ನಿಸಿದ್ದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ. 2008ರಲ್ಲಿ ಉತ್ತರಪ್ರದೇಶದ ಅನ್ರೋಹಾದಲ್ಲಿ ನಡೆದ 10 ತಿಂಗಳ ಶಿಶು ಸೇರಿದಂತೆ ಒಂದೇ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದು, ಅವರು ಪದೇ ಪದೆ ಅರ್ಜಿ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಹೇಳಿಕೆ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎಲ್ಲದಕ್ಕೂ ಒಂದು ಕೊನೆಯಿದೆ. ಪ್ರತಿ ಬಾರಿಯೂ ಶಿಕ್ಷೆಯನ್ನು ಪ್ರಶ್ನಿಸಬಹುದು ಎಂದು ಅಪರಾಧಿಗಳು ಭಾವಿಸುವುದು ತಪ್ಪು ಎಂದೂ ಹೇಳಿದೆ.