ಮಾಯಕೊಂಡ: ಸಮೀಪದ ದೊಡ್ಡ ಮಾಗಡಿ ಗ್ರಾಮದಲ್ಲಿ ಶನಿವಾರ ರಾತ್ರಿ ನೀರಭತೇಶ್ವರ ಸ್ವಾಮಿಯ ಜಾತ್ರೋತ್ಸವದಲ್ಲಿ ನೀರಿನಿಂದ ದೀಪ ಬೆಳಗಿಸುವ ಪವಾಡ ತಡರಾತ್ರಿ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ನಡೆಯುವ ಮೂರು ದಿನ ಮುಂಚಿತವಾಗಿ ನೀರಭತೇಶ್ವರ ಸ್ವಾಮಿಯ ಆರ್ಚಕರು ಗುಡಿಯನ್ನು ಪ್ರವೇಶ ಮಾಡಿ ಉಪವಾಸ ಮಾಡುವುದರೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ.
ಶನಿವಾರ ತಡರಾತ್ರಿ ಉರಮೆ, ವಾದ್ಯ, ಡೊಳ್ಳು ಸಮೇತ ದಿಂಡದಹಳ್ಳಿ, ಮಾಯಕೊಂಡ ಆಂಜನೇಯ ಸ್ವಾಮಿ ದೇವರುಗಳನ್ನು ಗ್ರಾಮದ ಹೊರವಲಯದಲ್ಲಿ ಇದಿರುಗೊಂಡು ದೊಡ್ಡ ಮಾಗಡಿ ಗ್ರಾಮಕ್ಕೆ ಕರೆದೊಯ್ಯಲಾಯಿತು.
ಮೂರು ದೇವತೆಗಳ ಸಮ್ಮುಖದಲ್ಲಿ ಗ್ರಾಮದ ಹೊರಭಾಗದಲ್ಲಿರುವ ಬಾವಿಯಲ್ಲಿ ಗಂಗೆ ಪೂಜೆ ನೆರವೇರಿಸಿ ತಂದ ನೀರನ್ನು ಹಣತೆಯಲ್ಲಿ ಹಾಕಿ ದೀಪ ಹೊತ್ತಿಸಿಕೊಂಡು ದೇವಾಲಯ ಪ್ರದಕ್ಷಿಣೆ ಹಾಕಲಾಯಿತು. ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ಪವಾಡ ಕಣ್ತುಂಬಿಕೊಂಡು ಶಿಳ್ಳೆ, ಕೇಕೆ ಹೊಡೆಯುವುದರ ಮೂಲಕ ಧನ್ಯತಾ ಭಾವ ಮೆರೆದರು.
ಗ್ರಾಮವನ್ನು ಜಾತ್ರೆ ಅಂಗವಾಗಿ ವಿದ್ಯುದ್ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದಾವಣಗೆರೆ, ಮಾಯಕೊಂಡ, ದಿಂಡದಹಳ್ಳಿ, ಪರಶುರಾಂಪುರ, ಹೆದೆ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಪ್ರತಿವರ್ಷದಂತೆ ಗೌಡರ ಬಸಪ್ಪ ಕುಟುಂಬದವರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಬಡ ಮಹಿಳೆಯೊಬ್ಬರು ದೇವರಿಗೆ ದೀಪ ಹಚ್ಚಲು ಎಣ್ಣೆಯಿಲ್ಲ ಎಂದು ಚಿಂತೆ ಮಾಡುತ್ತಿರುವಾಗ ನೀರಭತೇಶ್ವರ ಸ್ವಾಮಿ ಪ್ರತ್ಯಕ್ಷರಾಗಿ ನೀರಿನಿಂದಲೇ ದೀಪ ಹಚ್ಚುವಂತೆ ಅಪ್ಪಣೆ ಮಾಡುತ್ತಾರೆ. ಭಕ್ತೆ ನೀರಿನಿಂದ ದೀಪ ಹಚ್ಚಿದಾಗ ಅದು ಬೆಳಗುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಅಂದಿನಿಂದಲೂ ಜಾತ್ರೆ ನಡೆದುಕೊಂಡು ಬಂದಿದೆ.