ನವದೆಹಲಿ: ಕೆಲವೇ ದಿನಗಳ ಹಿಂದೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅತಿಕ್ರಮಣಕಾರರು ಎಂದು ಕರೆದು ವಿವಾದ ಎಬ್ಬಿಸಿದ್ದ ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರು ಇವತ್ತು ಲೋಕಸಭೆಯಲ್ಲಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಆಡಳಿತ ಪಕ್ಷದ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ, 2019ರ ಮೇಲಿನ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅಧೀರ್ ರಂಜನ್ ಚೌಧರಿ ಅವರು, ನಿರ್ಮಲಾ ಸೀತಾರಾಮನ್ ಅವರು ಸ್ವಂತಿಕೆಯನ್ನು ಬಿಟ್ಟು ಯಾರದ್ದೋ ಮರ್ಜಿಗೆ ಒಳಗಾಗಿ ಮಾತನಾಡುತ್ತಾರೆ ಎಂದು ಹೇಳಲು ಹೋಗಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ನಿಮ್ಮ ಕುರಿತಾಗಿ ಗೌರವವೇನೋ ಇದೆ ಆದರೆ ನಿಮ್ಮನ್ನು ನಿರ್ಮಲಾ ಸೀತಾರಾಮನ್ ಎಂದು ಕರೆಯುವ ಬದಲು ‘ನಿರ್ಬಲ’ ಸೀತಾರಾಮನ್ ಎಂದು ಕರೆಯುವುದೇ ಸೂಕ್ತ ಎಂದು ನನಗೆ ಬಹಳಷ್ಟು ಸಲ ಅನ್ನಿಸುತ್ತದೆ. ನೀವು ಮಂತ್ರಿಯಾಗೇನೋ ಇದ್ದೀರಿ ಆದರೆ ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಹೇಳುತ್ತೀದ್ದೀರೋ ಇಲ್ಲವೋ…’ ಎಂದು ಚೌಧರಿ ಅವರು ಸೀತಾರಾಮನ್ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಅವರು ಗುಜರಾತಿಗಳಾಗಿದ್ದರೂ ಇದೀಗ ದೆಹಲಿಯಲ್ಲಿ ವಾಸಿಸುತ್ತಿರುವ ಕಾರಣದಿಂದ ಅವರಿಬ್ಬರೂ ಅತಿಕ್ರಮಣಕಾರರಾಗಿದ್ದಾರೆ ಎಂದು ಚೌಧರಿ ಅವರು ಈ ಹಿಂದೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ವಿಷಯನ್ನು ಖಂಡಿಸಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಇಂದು ಪ್ರತಿಭಟನೆಯನ್ನೂ ಸಹ ನಡೆಸಿದ್ದರು.
ಇದೀಗ ನಿರ್ಮಲಾ ಅವರನ್ನು ಹೆಣ್ಣೆಂಬ ಕಾರಣಕ್ಕೆ ‘ನಿರ್ಬಲಾ’ ಎಂದು ಲಿಂಗತಾರತಮ್ಯಗೊಳಿಸಿ ಅಧೀರ್ ರಂಜನ್ ಚೌಧರಿ ಆಡಿರುವ ಮಾತುಗಳು ಆಡಳಿತ ಮತ್ತು ವಿಪಕ್ಷಗಳ ನಡುವೆ ಹೊಸ ಮಾತಿನ ಸಮರಕ್ಕೆ ಹಾದಿ ಮಾಡಿಕೊಟ್ಟಂತಾಗಿದೆ.