Advertisement

ನೀರಸಾಗರ ಹೂಳೆತ್ತಿದ್ದು ಒಂದೇ ದಿನ!

09:23 AM Jul 03, 2019 | Suhan S |

ಹುಬ್ಬಳ್ಳಿ: ಒಂದೂವರೆ ದಶಕದ ನಂತರ ನೀರಸಾಗರ ಕೆರೆ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿತ್ತಾದರೂ, ಮಳೆ ಪರಿಣಾಮ ಅನಿವಾರ್ಯವಾಗಿ ಹೂಳೆತ್ತುವ ಕಾರ್ಯ ನಿಲ್ಲಿಸಬೇಕಾಗಿದೆ.

Advertisement

ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರದ ಸ್ಥಿತಿ ಇದೆ. ನೀರಸಾಗರ ಸಂಪೂರ್ಣವಾಗಿ ಬತ್ತಿ ಹೋಗಿ ಮೂರು ವರ್ಷವಾಗಿದೆ. ಬೇಸಿಗೆ ವೇಳೆಗೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದರೆ ನಿರೀಕ್ಷಿತ ಗುರಿ ತಲುಪಿ, ಹೆಚ್ಚು ನೀರು ಸಂಗ್ರಹಕ್ಕೆ ಅನುವು ಮಾಡಿಕೊಡಬಹುದಾಗಿತ್ತು. ಆದರೆ, ಮಳೆಗಾಲ ಆರಂಭವಾಗುತ್ತಿದೆ ಎಂದು ತಿಳಿದ ನಂತರ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದು, ಚಾಲನೆ ನೀಡಿದ್ದಷ್ಟೇ ಸಂತಸ ಎಂಬಂತಾಗಿದೆ.

ಟಾಟಾ ಹಿಟಾಚಿ ಕಂಪನಿ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ(ಸಿಎಸ್‌ಆರ್‌)ಯಡಿ 8 ಕೋಟಿ ವೆಚ್ಚದಲ್ಲಿ ನೀರಸಾಗರ ಕೆರೆ ಹೂಳೆತ್ತಲು ಮುಂದಾಗಿದೆ. ಮೂರು ತಿಂಗಳಲ್ಲಿ 12 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳೆತ್ತುವ ಗುರಿ ಹೊಂದಲಾಗಿತ್ತು. ಇದೀಗ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ನೀರಸಾಗರಕ್ಕೆ ನೀರು ಹರಿದು ಬರುತ್ತಿರುವುದರಿಂದ ಹೂಳೆತ್ತುವ ಕಾರ್ಯ ಸ್ಥಗಿತಗೊಳಿಸಬೇಕಾಗಿದೆ.

ಕಂಪನಿ ಕಾರ್ಯಕ್ಕೆ ಶ್ಲಾಘನೆ: 2003ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸುಮಾರು 7.72 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳೆತ್ತುವ ಕೆಲಸ ಅಂದಿನ ಸರಕಾರದಿಂದ ಆಗಿತ್ತು. 2009ರಲ್ಲಿ ಕೆರೆ ಭರ್ತಿಯಾಗಿತ್ತು. ನಂತರ ಮಳೆ ಕೊರತೆಯಿಂದ ನೀರಸಾಗರದಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿರಲಿಲ್ಲ. ಕಳೆದ ಐದಾರು ವರ್ಷಗಳ ಹಿಂದೆ ಹೂಳೆತ್ತುವ ಕುರಿತು ಚರ್ಚೆಗಳು ಶುರುವಾಗಿದ್ದವು. ಆದರೆ ಈ ಬಗ್ಗೆ ಯಾವ ಸರಕಾರಗಳು ತಲೆಕೆಡಿಸಿಕೊಂಡಿರಲಿಲ್ಲ. ಸರಕಾರ ಮಾಡಬೇಕಾದ ಕಾರ್ಯವನ್ನು ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದ ಸಾರ್ವಜನಿಕರು, 15 ವರ್ಷಗಳ ನಂತರ ಕೆರೆ ಹೂಳೆತ್ತುವ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ ಯೋಜನೆಗೆ ಆಯ್ದುಕೊಂಡ ಸಮಯ ಸೂಕ್ತವಲ್ಲದ ಹಿನ್ನೆಲೆಯಲ್ಲಿ ಹೂಳೆತ್ತುವ ಕೆಲಸ ಸ್ಥಗಿತಗೊಂಡಿದ್ದು, ಕಾಮಗಾರಿ ಮುಂದುವರಿಯುತ್ತಾ ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

ಮಣ್ಣು ಪಡೆಯಲು ಮನಸ್ಸು ಮಾಡದ ರೈತರು!:

ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ ದಿನ ಸುಮಾರು ಆರು ಟ್ರಿಪ್‌ ಮಣ್ಣನ್ನು ತೆಗೆಯಲಾಗಿದೆ. ಅಷ್ಟಕ್ಕೇ ಕಾಮಗಾರಿ ಸೀಮಿತವಾಗಿದೆ. ಕಲ್ಲು ಮಿಶ್ರಿತ ಮಣ್ಣು ಬಂದಿದ್ದರಿಂದ ಯಾವ ರೈತರೂ ಇದನ್ನು ತೆಗೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಹೀಗಾಗಿ ಈ ಮಣ್ಣನ್ನು ಕೆರೆ ಮುಂಭಾಗದಲ್ಲಿರುವ ಜಲ ಮಂಡಳಿ ಜಾಗದಲ್ಲಿ ಸುರಿಯಲಾಗಿದೆ. ಸ್ಥಳೀಯ ಶಾಸಕ ಸಿ.ಎಂ. ನಿಂಬಣ್ಣವರ ಆವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಕಂಪನಿಯ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಕೆರೆ ಹಿಂಭಾಗದಲ್ಲಿನ ಮಣ್ಣನ್ನು ತೆಗೆದು ಅದನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ನೀರಸಾಗರ ಕೆರೆಯ ಹೂಳು ತುಂಬಾ ಫಲವತ್ತತೆಯಿಂದ ಕೂಡಿದೆ. ಬೇಸಿಗೆಯಲ್ಲಿ ಹೂಳೆತ್ತುವ ಕೆಲಸ ಆರಂಭಿಸಿದ್ದರೆ ರೈತರು ಹೂಳಿನ ಮಣ್ಣನ್ನು ನಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ಸಾಗಿಸುತ್ತಿದ್ದರು. ಹೂಳೆತ್ತುವ ಕಾರ್ಯ ಸದ್ಯಕ್ಕೆ ಕೈಗೂಡುವ ಸಾಧ್ಯತೆ ಇಲ್ಲ ಎಂದೆನಿಸುತ್ತಿದೆ.• ಫಕೀರಪ್ಪ ರೊಟ್ಟಿ,ರೈತ

Advertisement

• ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next