ಕಳೆದ ವಾರವಷ್ಟೇ “ಕೃಷ್ಣ ಟಾಕೀಸ್’ ಚಿತ್ರ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಈ ಚಿತ್ರದ ಕಥಾಹಂದರ, ನಟ ಅಜೇಯ್ ರಾವ್ ಅಭಿನಯ, ವಿಜಯಾನಂದ್ ನಿರ್ದೇಶನದ ಜೊತೆಗೆ ತೆರೆಮೇಲೆ ನೋಡುಗರ ಗಮನ ಸೆಳೆಯುವ ಮತ್ತೂಂದು ಪಾತ್ರ ಚಿತ್ರದ ಖಳನಾಯಕನದ್ದು. ಅಂದಹಾಗೆ, ಸಸ್ಪೆನ್ಸ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜೇಯ್ ರಾವ್ ಎದುರು ಖಳನಾಯಕನಾಗಿ ಅಬ್ಬರಿಸಿರುವ ಪ್ರತಿಭೆ ಹೆಸರು ನಿರಂತ್.
ಯುವನಟ ನಿರಂತ್ ನಿರ್ದೇಶಕನಾಗಬೇಕು ಎಂಬ ಕನಸನ್ನ ಇಟ್ಟುಕೊಂಡು ಚಿತ್ರರಂಗಕ್ಕೆ ಬಂದ ಹುಡುಗ. ಎರಡು ಮೂರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಒಂದಷ್ಟು ಅನುಭವ ಕೂಡ ಗಳಿಸಿಕೊಂಡ ನಿರಂತ್‌ಗೆ, ಕೊನೆಗೆ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂತು. 2016ರಲ್ಲಿ ತೆರೆಕಂಡ “ಲೈಫ್ ಸೂಪರ್’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಪರಿಚಯವಾದ ನಿರಂತ್, ಆ ನಂತರ ತಮಿಳಿನ “ಸಂತೋಷ ತಿಲ್ ಕಲವರಂ’, ಮತ್ತೆ ಕನ್ನಡದಲ್ಲಿ “ಕಾರ್ನಿ’, “ಪುರಾವೆ’ ಹೀಗೆ ಇಲ್ಲಿಯವರೆಗೆ ಸುಮಾರು ಐದಾರು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡ ನಟ. ಸದ್ಯ ನೆಗೆಟಿವ್ ಶೇಡ್ ಪಾತ್ರಗಳತ್ತಲೂ ಮುಖ ಮಾಡಿರುವ ನಿರಂತ್, “ಕೃಷ್ಣ ಟಾಕೀಸ್’ ಚಿತ್ರದ ಮೂಲಕ ಖಡಕ್ ವಿಲನ್ ಆಗಿ ಪ್ರೇಕ್ಷಕರ ಮುಂದೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಲೆಕ್ಕಾಚಾರ ಉಲ್ಟಾಪಲ್ಟಾ: ಚೇತರಿಕೆಯ ಮೊದಲೇ ಸಿನಿ ಮಂದಿಯ ಕನಸು ನುಂಗಿದ ಕೊರೋನಾ
ಈ ಬಗ್ಗೆ ಮಾತನಾಡುವ ನಿರಂತ್, “ಡೈರೆಕ್ಟರ್ ಆಗಬೇಕೆಂದು ಬಂದವನು ಈಗ ಆ್ಯಕ್ಟರ್ ಆಗಿದ್ದೇನೆ. ನನಗೆ ಸಿಕ್ಕ ಕ್ಯಾರೆಕ್ಟರ್‌ಗಳನ್ನು ಎಷ್ಟು ಚೆನ್ನಾಗಿ ನನ್ನಿಂದ ಮಾಡಲು ಸಾಧ್ಯವೋ ಅಷ್ಟು ಚೆನ್ನಾಗಿ ಮಾಡಲು ಎಲ್ಲ ಎಫರ್ಟ್ ಹಾಕುತ್ತಿದ್ದೇನೆ. ಮುಂದೆ ಕೂಡ ಅಷ್ಟೇ, ಕೇವಲ ಹೀರೋ ಮಾತ್ರವಲ್ಲದೆ, ಹೊಸಥರದ ಪ್ರಯೋಗದ ಪಾತ್ರಗಳನ್ನೂ ಮಾಡಲು ಸಿದ್ಧ ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ “ಕೃಷ್ಣ ಟಾಕೀಸ್’ ಸಿನಿಮಾದಲ್ಲಿತ್ತು. ನನ್ನ ಪಾತ್ರಕ್ಕಾಗಿ ತುಂಬ ಹೋಮ್ ವರ್ಕ್, ಪ್ರಿಪರೇಷನ್ ಇತ್ತು. ಉದ್ದ ಕೂದಲು ಬಿಟ್ಟು ಬ್ಯಾಡ್‌ಬಾಯ್ ಥರ ಕಾಣಬೇಕಿತ್ತು’ ಎನ್ನುತ್ತಾರೆ.
ಒಟ್ಟಾರೆ “ಕೃಷ್ಣ ಟಾಕೀಸ್’ ಮೂಲಕ ನಿರಂತ್ ಸಿನಿಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿದ್ದು, ನಿರಂತ್ ಅಭಿನಯದ ಬಗ್ಗೆ ಪ್ರೇಕ್ಷಕರು, ವಿಮರ್ಶಕರು, ಚಿತ್ರೋದ್ಯಮದ ಮಂದಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದರ ನಡುವೆಯೇ ನಿರಂತ್, ಇನ್ನೂ ಎರಡು – ಮೂರು ಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರಗಳು ಸದ್ಯ ಮಾತುಕಥೆಯ ಹಂತದಲ್ಲಿದ್ದು, ಇನ್ನಷ್ಟೇ ಅಧಿಕೃತವಾಗಿ ಅನೌನ್ಸ್ ಆಗಬೇಕಾಗಿದೆ.