Advertisement

ದೇವೇಗೌಡರ ಕುಟುಂಬ ಮತ್ತೆ ಹುಟ್ಟಿ ಬಂದ್ರೂ ಸಿದ್ದು ಹೆಸರು ಕೆಡಿಸಲು ಆಗಲ್ಲ

11:04 AM Aug 29, 2019 | Sriram |

ಬಾಗಲಕೋಟೆ: ಸಿದ್ದರಾಮಯ್ಯ ಅವರಿಗೆ ಯಾರೂ ಸರಿಸಾಟಿ ಇಲ್ಲ. ಅವರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯವಿತ್ತು. ಎಲ್ಲ ಸಮುದಾಯದವರೂ ಸಚಿವರಾಗಿದ್ದರು. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರು ಆರೋಪಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಮತ್ತೊಮ್ಮೆ ಹುಟ್ಟಿ ಬಂದರೂ, ಸಿದ್ದರಾಮಯ್ಯ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆಗೆ ಆಗಮಿಸಿದ್ದ ಅವರು, ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಸಿದ್ದರಾಮಯ್ಯ ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾದರೆ ಬಹಳ ಖುಷಿ. ಅವರ ಸಚಿವ ಸಂಪುಟವೇ ಬಸವಣ್ಣನವರ ಅನುಭವ ಮಂಟಪದಂತೆ ಇತ್ತು. ಈಗಿನ ಸರ್ಕಾರದ ಕುರಿತು ಏನೂ ಹೇಳುವುದಿಲ್ಲ ಎಂದರು.


ಸಿದ್ದರಾಮಯ್ಯ, ಸಿದ್ದರಾಮಯನೇ. ದೇವೇಗೌಡರು, ಅವರ ಪುತ್ರರು ಎಷ್ಟೇ ಆರೋಪ, ಹೆಸರು ಕೆಡಿಸಲು ಪ್ರಯತ್ನಿಸಿದರೂ ಸಾಧ್ಯವಿಲ್ಲ. ದೇವೇಗೌಡರ ಕುಟುಂಬ ಮತ್ತೊಮ್ಮೆ ಹುಟ್ಟಿ ಬಂದರೂ, ಸಿದ್ದು ಹೆಸರು ಕೆಡಿಸಲು ಆಗಲ್ಲ. ಅಪುತ್ರಷ್ಯ ವಿತಿರ್ನಾಸ್ತ್ರ ಎಂಬಂತೆ ಕನಕದಾಸರು ಹೇಳಿದಂತೆ, ಮಕ್ಕಳಂತೆ ಆಗದಿದ್ದರೆ ಮೋಕ್ಷವಿಲ್ಲವೆಂದು ಹೇಳಿದ್ದಾರೆ. ಬಹುಶಃ ದೇವೇಗೌಡರಿಗೆ ಅರೆ ವಯಸ್ಸು. ೮೦ ವರ್ಷ ಆಗಿವೆ. ಮಕ್ಕಳು ಆಡಿದಂಗೆ ಆಡ್ತಾರೆ. ಮಾಜಿ ಪ್ರಧಾನಿ ಆಗಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಗೌರವವಿದೆ. ವಯಸ್ಸಾದ ಮೇಲೆ ಮಕ್ಕಳಂತೆ ಆಡಿದಂತೆ ಆಡ್ತಾರೆ ಎನ್ನುತ್ತಾರೆ. ಹೀಗಾಗಿ ದೇವೇಗೌಡರೂ, ಈಗ ಮಕ್ಕಳಂತಾಗಿದ್ದಾರೆ. ಮಕ್ಕಳು ಯಾವ ರೀತಿ ಆಡ್ತಾರೆ ಎಂಬುದು ಗೊತ್ತಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಕುರಿತು ವ್ಯಂಗ್ಯವಾಡಿದರು.

ಕುರುಬ ಸಮಾಜಕ್ಕೆ ಡಿಸಿಎಂ ಸ್ಥಾನ :
ಬಿಜೆಪಿ ಸರ್ಕಾರದಲ್ಲಿ ಕುರುಬ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡಬೇಕಿತ್ತು. ಹಿಂದುಳಿದ ವರ್ಗದವರಿಗೆ ಡಿಸಿಎಂ ಸ್ಥಾನ ಕೊಡಬೇಕೆಂಬ ಕೂಗು ಇತ್ತು. ಕೊಟ್ಟಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಈಗಲಾದರೂ ಹಿಂದುಳಿದವರಿಗೆ ಡಿಸಿಎಂ ಸ್ಥಾನ ಕೊಡಬೇಕು. ಈಶ್ವರಪ್ಪ ಅವರೇ ಅಂತೇನಿಲ್ಲ. ಸಾಮಾಜಿಕ ನ್ಯಾಯದಡಿ ಹಿಂದುಳಿದವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದರೆ ಸಾಮಾಜಿಕ ನ್ಯಾಯ ಸಿಗುತ್ತಿತ್ತು. ಆದರೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ಸಾಮಾಜಿಕ ನ್ಯಾಯ ಕೊಡಬೇಕು. ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅರಿವಿಲ್ಲ. ಸಿಎಂ ಆದವರಿಗೆ ಸಾಮಾಜಿಕ ನ್ಯಾಯದ ಅರಿವು ಇರಬೇಕು ಎಂದರು.

ಕಾರು-ಮನೆ ಬೇಕಾದವರು ವಿರೋಧ ಪಕ್ಷದ ನಾಯಕರಾಗಲಿ ಎಂಬ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ನಾನು ಗಮನಿಸಿಲ್ಲ. ಸಿದ್ದರಾಮಯ್ಯ ಉದ್ದೇಶಿಸಿಯೇ ಆ ರೀತಿ ಹೇಳಿಕೆ ಕೊಟ್ಟಿದ್ದರೆ ಸರಿಯಲ್ಲ. ಒಬ್ಬ ಪುಬುದ್ಧ ರಾಜಕಾರಣ ಆಗಿ, ಶಿವಕುಮಾರ ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಸರ್ಕಾರದ ವಿರುದ್ಧ ಮಠಾಧೀಶರ ಹೋರಾಟ :
ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಇಲ್ಲಿನ ಸಂಕಷ್ಟ ಅರಿಯಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಬರಬೇಕು. ಪರಿಸ್ಥಿತಿ ಅರಿತು, ರಾಜ್ಯಕ್ಕೆ ಅತಿಹೆಚ್ಚು ಅನುದಾನ ಕಲ್ಪಿಸಬೇಕು. ಅನುದಾನ ನೀಡುವಲ್ಲಿ ರಾಜ್ಯಕ್ಕೆ ಯಾವುದೇ ತಾರತಮ್ಯವಾಗಬಾರದು. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಕೂಡಲೇ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು. ಸಂತ್ರಸ್ತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಸ್ವಾಮೀಜಿಗಳೆಲ್ಲ ಸೇರಿ ಹೋರಾಟ ಮಾಡಬೇಕಾಗುತ್ತದೆ. ಹಿಂದುಳಿದ, ದಲಿತ ಮಠಾಧೀಶರೆಲ್ಲ ಸೇರಿ, ವಿಧಾನಸೌಧದ ಎದುರು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ತುಮಕೂರಿನ ಶ್ರೀ ಮಹಾಲಿಂಗ ಸ್ವಾಮೀಜಿ, ಶಿರಗುಪ್ಪದ ಶ್ರೀ ಬಸವಭೂಷಣ ಸ್ವಾಮೀಜಿ, ಮುಧೋಳದ ಸತೀಶ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸತೀಶ ಬಂಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next